ಎಸ್ಐಆರ್ ವಿರುದ್ಧ ಕಾಂಗ್ರೆಸ್ ಹೋರಾಟ: ಅಕ್ರಮ ಮತದಾರರನ್ನು ಉಳಿಸುವ ಹುನ್ನಾರ – ಬಿಜೆಪಿ ಅಧ್ಯಕ್ಷ ಸಂದೀಪ ಪಾಟೀಲ ಝಳಕಿ ಆರೋಪ

ವಿಜಯಪುರ: ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿದ ಮತಗಳಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ಸರ್ಕಾರ, ಮುಂದೆಯೂ ಅದೇ ತಂತ್ರ ಬಳಸಲು ಯತ್ನಿಸುತ್ತಿದೆ ಎಂದು ನಗರ ಮಂಡಲ ಬಿಜೆಪಿ ಅಧ್ಯಕ್ಷ ಸಂದೀಪ ಪಾಟೀಲ ಝಳಕಿ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಮೂಲಕ ಅಕ್ರಮ ಮತದಾರರನ್ನು ತೆಗೆಯುತ್ತಿರುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಡೀ ಸಂಪುಟದೊಂದಿಗೆ ಚುನಾವಣಾ ಆಯೋಗದ ಮುಂದೆ ಕಾನೂನುಬಾಹಿರವಾಗಿ ಧರಣಿ ನಡೆಸಿದ್ದಾರೆ. ಲಕ್ಷಾಂತರ ಅಕ್ರಮ ಬಾಂಗ್ಲಾ ವಲಸಿಗರು, ಮೃತಪಟ್ಟವರು ಮತ್ತು ಎರಡು ಕಡೆ ಹೆಸರಿರುವವರನ್ನು ಮತಪಟ್ಟಿಯಲ್ಲಿ ಉಳಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು.

ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ಸೇರ್ಪಡೆಯಾದ ಮತದಾರರನ್ನು ಎಸ್ಐಆರ್ ಮೂಲಕ ತೆಗೆಯಲಾಗುತ್ತಿದೆ. ದಾಖಲೆ ಸರಿಯಿಲ್ಲದ 45 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಅವರು ನ್ಯಾಯಸಮ್ಮತ ಮತದಾರರಾಗಿದ್ದರೆ ದಾಖಲೆ ನೀಡಲಿ. ಅಕ್ರಮ ಮತದಾರರು ಪಟ್ಟಿಯಲ್ಲಿ ಉಳಿಯಬಾರದು ಎಂದು ಹೇಳಿದರು.

ಫಾರಂ 7 ಅನ್ನು ಯಾರು ಬೇಕಾದರೂ ನೀಡಬಹುದು ಎಂದು ಚುನಾವಣಾ ಆಯೋಗವೇ ಸ್ಪಷ್ಟಪಡಿಸಿದೆ. ಅಧಿಕಾರಿಗಳು ಆಕ್ಷೇಪಣೆಗಳನ್ನು ಸರಿಯಾಗಿ ಪರಿಶೀಲಿಸಬೇಕು. ಆದರೆ ಕಾಂಗ್ರೆಸ್ ನಾಯಕರು ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿ ಬೆದರಿಸುತ್ತಿದ್ದಾರೆ. ಕಾಂಗ್ರೆಸ್ ಗೊಡ್ಡ ಬೆದರಿಕೆಗೆ ಬಿಜೆಪಿ ಕಾರ್ಯಕರ್ತರು ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲದಲ್ಲಿ ರೈತರಿಗೆ ಪರಿಹಾರ ನೀಡಲು ಹಣವಿಲ್ಲದೆ ಹೆಣಗಾಡುತ್ತಿರುವ ಸರ್ಕಾರ, ಎಸ್ಐಆರ್ ಬಗ್ಗೆ ಕುಂಟು ನೆಪ ಹುಡುಕುತ್ತಿದೆ ಎಂದು ಟೀಕಿಸಿದರು.

ವರದಿ: ಅಜೀಜ ಪಠಾಣ್,

error: Content is protected !!