ಗುಡಿಬಂಡೆ : ಶಿಳ್ಳೆ-ಚಪ್ಪಾಳೆಯ ನಡುವೆ ಮಣ್ಣಿನ ಮಕ್ಕಳ ರೋಚಕ ಕಾದಾಟಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಸಾಕ್ಷಿಯಾಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ಕಬಡ್ಡಿ ಪಂದ್ಯಾವಳಿಯಲ್ಲಿ 6 ತಾಲೂಕುಗಳ 300ಕ್ಕೂ ಹೆಚ್ಚು ಬಾಲಕ-ಬಾಲಕಿಯರು ಪಾಯಿಂಟ್ಗಳಿಗಾಗಿ ಹುಲಿಗಳಂತೆ ಸೆಣಸಾಡಿದರು.
ರೈಡರ್ಗಳ ಮಿಂಚಿನ ಓಟ, ಡಿಫೆಂಡರ್ಗಳ ಬಿಗಿ ಹಿಡಿತ ಪಂದ್ಯಾವಳಿಗೆ ರೋಚಕತೆ ತಂದಿತ್ತು. ಟಿಪಿಒ ಹನುಮಂತರಾಯಪ್ಪ ಮಾತನಾಡಿ, ಗುಡಿಬಂಡೆಯಲ್ಲಿ 2ನೇ ಬಾರಿಗೆ ಜಿಲ್ಲಾ ಮಟ್ಟದ ಕೂಟ ನಡೆಯುತ್ತಿರುವುದು ಹೆಮ್ಮೆ, ಇಲ್ಲಿ ಗೆದ್ದ ತಂಡಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಲಿವೆ ಎಂದರು.
ಜಮೀನಿದೆ, ಮೈದಾನವಿಲ್ಲ – ಅನುದಾನಕ್ಕೆ ಕೂಗು:
ಪಂದ್ಯಾವಳಿಯ ನಡುವೆಯೇ ಕ್ರೀಡಾಂಗಣದ ಕೊರತೆ ಚರ್ಚೆಯಾಯಿತು. ತಾಲೂಕಿನಲ್ಲಿ ಅಪಾರ ಪ್ರತಿಭೆ, ನುರಿತ ದೈಹಿಕ ಶಿಕ್ಷಕರಿದ್ದರೂ ಸುಸಜ್ಜಿತ ಮೈದಾನವಿಲ್ಲ. 4-5 ಎಕರೆ ಜಮೀನು ಮೀಸಲಿಟ್ಟಿದ್ದರೂ ಅನುದಾನವಿಲ್ಲದೆ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಆಕ್ರೋಶ ವ್ಯಕ್ತಪಡಿಸಿ, ಶಾಸಕರು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವರದಿ: ಜೆ.ಎನ್. ಕೃಷ್ಣಾರೆಡ್ಡಿ, ಗುಡಿಬಂಡೆ
