ಮೈಕ್ ಹಿಡಿದು ರೀಲ್ಸ್ ಮಾಡುವವರೆಲ್ಲ ಪತ್ರಕರ್ತರೇ? ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಚರ್ಚೆ…

ಡಿಜಿಟಲ್ ಮಾಧ್ಯಮಗಳ ಕಾರ್ಯವೈಖರಿ, ಸ್ವತಂತ್ರ ಪತ್ರಕರ್ತರ ಗುರುತು ಮತ್ತು ಪತ್ರಕರ್ತರ ಸುರಕ್ಷತೆ ಕುರಿತು ಗಮನ ಸೆಳೆದ ವಿಚಾರಣೆ.

ಕೈಯಲ್ಲಿ ಮೈಕ್ ಹಿಡಿದು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವವರೆಲ್ಲ ಪತ್ರಕರ್ತರಾಗುತ್ತಾರೆಯೇ? ಸ್ವತಂತ್ರ ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಹೇಗೆ? ಇಂತಹ ಮಹತ್ವದ ಪ್ರಶ್ನೆಗಳು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಚರ್ಚೆಗೆ ಬಂದಿವೆ.

ದೆಹಲಿ ಪ್ರತಿಭಟನೆಗಳ ವರದಿಗಾರಿಕೆಗೆ ತೆರಳಿದ್ದ ಮಹಿಳಾ ಪತ್ರಕರ್ತರ ಮೇಲೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಪತ್ರಕರ್ತರ ಸುರಕ್ಷತೆ, ಮಾಧ್ಯಮ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಗುರುತಿನ ವಿಚಾರಗಳು ಮುನ್ನೆಲೆಗೆ ಬಂದಿವೆ.

ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಸ್ವತಂತ್ರ ಪತ್ರಕರ್ತರು ಯಾರು ಮತ್ತು ರೀಲ್ಸ್ ಮಾಡುವವರು ಯಾರು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಮೊಬೈಲ್ ಕೈಯಲ್ಲಿದ್ದರೆ ಸಾಕು, ಯಾವುದೇ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಹುದು. ಆದರೆ ವಿಡಿಯೊ ಮಾಡುವುದೇ ಪತ್ರಿಕೋದ್ಯಮವೇ? ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸದೆ, ಸಂಬಂಧಪಟ್ಟವರ ಅಭಿಪ್ರಾಯ ಪಡೆಯದೆ, ಕೇವಲ ಪ್ರಚಾರಕ್ಕಾಗಿ ವಿಡಿಯೊಗಳನ್ನು ಪ್ರಕಟಿಸುವುದಕ್ಕೂ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೂ ವ್ಯತ್ಯಾಸವಿದೆ ಎಂಬ ಚರ್ಚೆ ಈ ಬೆಳವಣಿಗೆಯಿಂದ ಮತ್ತೆ ಮುನ್ನೆಲೆಗೆ ಬಂದಿದೆ.

ಆದರೆ ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುವ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದೂ ಸರಿಯಲ್ಲ. ಇಂದು ಅನೇಕರು ಯಾವುದೇ ದೊಡ್ಡ ಮಾಧ್ಯಮ ಸಂಸ್ಥೆಯ ಬೆಂಬಲವಿಲ್ಲದೆ ಸ್ವತಂತ್ರವಾಗಿ ವರದಿಗಾರಿಕೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಇಂತಹವರಿಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸುವ ಅವಕಾಶ ಮತ್ತು ಸೂಕ್ತ ರಕ್ಷಣೆ ದೊರೆಯಬೇಕೆಂಬುದು ಅಷ್ಟೇ ಮುಖ್ಯವಾದ ವಿಚಾರವಾಗಿದೆ.

ಮಹಿಳಾ ಪತ್ರಕರ್ತರ ಸುರಕ್ಷತೆಯ ಪ್ರಶ್ನೆ…

ದೆಹಲಿ ಪ್ರತಿಭಟನೆಗಳ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿವೆ. ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸಭೆಗಳ ವರದಿಗಾರಿಕೆ ಮಾಡುವ ಪತ್ರಕರ್ತರ ಸುರಕ್ಷತೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕೆಂಬ ಬೇಡಿಕೆಯೂ ಮುಂದಿಟ್ಟಿವೆ.

ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ಕಾನೂನು ಪ್ರಕ್ರಿಯೆ ಮುಂದುವರಿಯಬೇಕಿದ್ದು, ಆರೋಪಗಳನ್ನು ಸಾಬೀತಾದ ಸತ್ಯವೆಂದು ಪರಿಗಣಿಸಲಾಗದು. ಆದರೂ ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಿಸುವ ಸುರಕ್ಷತಾ ಸಮಸ್ಯೆಗಳ ಕುರಿತು ಈ ಪ್ರಕರಣ ಮಹತ್ವದ ಚರ್ಚೆಗೆ ಕಾರಣವಾಗಿದೆ.

ಪತ್ರಕರ್ತರಿಗೆ ರಕ್ಷಣೆ ನೀಡುವಾಗ ಕೇವಲ ಮಾನ್ಯತಾ ಪತ್ರ ಹೊಂದಿರುವವರನ್ನೇ ಪರಿಗಣಿಸಬೇಕೇ ಅಥವಾ ವೃತ್ತಿಪರವಾಗಿ ವರದಿಗಾರಿಕೆ ಮಾಡುತ್ತಿರುವ ಸ್ವತಂತ್ರ ಪತ್ರಕರ್ತರನ್ನೂ ಒಳಗೊಳ್ಳಬೇಕೇ ಎಂಬ ಪ್ರಶ್ನೆಯೂ ಇಲ್ಲಿ ಪ್ರಸ್ತುತವಾಗಿದೆ.

ಪತ್ರಕರ್ತನ ಗುರುತು ಕೇವಲ ಮೈಕ್‌ನಿಂದ ನಿರ್ಧಾರವಾಗುವುದಿಲ್ಲ

ಪತ್ರಿಕೋದ್ಯಮವೆಂದರೆ ಕೇವಲ ಕ್ಯಾಮೆರಾ ಮುಂದೆ ನಿಂತು ಮಾತನಾಡುವುದಲ್ಲ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ದಾಖಲೆಗಳನ್ನು ಸಂಗ್ರಹಿಸುವುದು, ಸಂಬಂಧಪಟ್ಟವರ ಪ್ರತಿಕ್ರಿಯೆ ಪಡೆಯುವುದು, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವರದಿ ಮಾಡುವುದು ಮತ್ತು ತಪ್ಪು ಮಾಹಿತಿ ಪ್ರಕಟವಾದರೆ ಅದನ್ನು ತಿದ್ದಿಕೊಳ್ಳುವುದು ಪತ್ರಿಕೋದ್ಯಮದ ಮೂಲ ಜವಾಬ್ದಾರಿಗಳಾಗಿವೆ.

ಆದರೆ ಇದೇ ಮಾನದಂಡಗಳ ಹೆಸರಿನಲ್ಲಿ ಸ್ವತಂತ್ರ ಪತ್ರಕರ್ತರನ್ನು ಕಡೆಗಣಿಸುವಂತೆಯೂ ಆಗಬಾರದು. ದೊಡ್ಡ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗಷ್ಟೇ ಪತ್ರಿಕೋದ್ಯಮದ ಹಕ್ಕುಗಳು ಸೀಮಿತವಾಗಬಾರದು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸಣ್ಣ ಪತ್ರಿಕೆಗಳು, ಸ್ಥಳೀಯ ಸುದ್ದಿ ಮಾಧ್ಯಮಗಳು ಮತ್ತು ಸ್ವತಂತ್ರ ವರದಿಗಾರರ ಪಾತ್ರವನ್ನೂ ಗುರುತಿಸಬೇಕಾಗಿದೆ.

ಡಿಜಿಟಲ್ ಮಾಧ್ಯಮಗಳ ಬೆಳವಣಿಗೆ ಪತ್ರಿಕೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಅದೇ ಸಮಯದಲ್ಲಿ ಸುಳ್ಳು ಸುದ್ದಿ, ಪರಿಶೀಲನೆಯಿಲ್ಲದ ಆರೋಪಗಳು ಮತ್ತು ಪ್ರಚಾರದ ಉದ್ದೇಶದ ವಿಡಿಯೊಗಳ ಸವಾಲುಗಳನ್ನೂ ತಂದಿದೆ. ಹೀಗಾಗಿ ಪತ್ರಕರ್ತರ ಗುರುತಿಗೆ ಸಂಬಂಧಿಸಿದ ಚರ್ಚೆಯಲ್ಲಿ ವೃತ್ತಿಪರ ಹೊಣೆಗಾರಿಕೆ ಮತ್ತು ಮಾಧ್ಯಮ ಸ್ವಾತಂತ್ರ್ಯ ಎರಡಕ್ಕೂ ಸಮಾನ ಮಹತ್ವ ನೀಡಬೇಕಿದೆ.

ಸುಪ್ರೀಂ ಕೋರ್ಟ್‌ನಲ್ಲಿನ ಈ ಚರ್ಚೆಯನ್ನು ರೀಲ್ಸ್ ಮಾಡುವವರ ವಿರುದ್ಧದ ಅಂತಿಮ ತೀರ್ಪು ಎಂದು ಅರ್ಥೈಸುವುದು ಸರಿಯಲ್ಲ. ಬದಲಾಗಿ, ಪತ್ರಕರ್ತರ ಸುರಕ್ಷತೆ ಮತ್ತು ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮದ ಗುರುತಿನ ಕುರಿತು ಎದುರಾಗಿರುವ ಪ್ರಶ್ನೆಗಳತ್ತ ಗಮನ ಸೆಳೆದ ಬೆಳವಣಿಗೆಯಾಗಿ ನೋಡಬೇಕಾಗಿದೆ.

ಮೈಕ್ ಹಿಡಿದ ಮಾತ್ರಕ್ಕೆ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂಬ ಮಾತು ಎಷ್ಟು ಮುಖ್ಯವೋ, ಮೈಕ್ ಹಿಡಿದಿರುವವರು ಡಿಜಿಟಲ್ ಮಾಧ್ಯಮದವರು ಎಂಬ ಕಾರಣಕ್ಕೆ ಅವರನ್ನು ಪತ್ರಕರ್ತರೆಂದು ಪರಿಗಣಿಸಬಾರದು ಎನ್ನುವುದೂ ಅಷ್ಟೇ ಸರಿಯಾದ ಮಾನದಂಡವಲ್ಲ. ಪತ್ರಿಕೋದ್ಯಮದ ನಿಜವಾದ ಮೌಲ್ಯ ವ್ಯಕ್ತಿಯ ಕೈಯಲ್ಲಿರುವ ಉಪಕರಣದಲ್ಲಿಲ್ಲ; ಆತ ಸಮಾಜದ ಮುಂದೆ ಇಡುವ ಸುದ್ದಿಯ ಸತ್ಯಾಸತ್ಯತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಬದ್ಧತೆಯಲ್ಲಿದೆ.

ಆದರೆ..
ನನ್ನ ಅಭಿಪ್ರಾಯದಲ್ಲಿ ನೋಡೋದಾದರೆ…
ಇಂದು ಮೊಬೈಲ್ ಕೈಯಲ್ಲಿದ್ದರೆ ಸಾಕು, ಯಾವುದೇ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಹುದು ಎನ್ನುವವನು ಎಂದಿಗೂ ಪತ್ರಕರ್ತನಾಗುವುದಕ್ಕೂ.
ಪತ್ರಕರ್ತ ಎನಿಸಿಕೊಳ್ಳುವುದಕ್ಕೂ..
ಸಾಧ್ಯವಿಲ್ಲ…

ಇವರನ್ನು journalist ಗಳೆಂದು ಕರೆಯದೆ…
Reels Creator…
Content Creator…
Digital Content Creator…
Social Media Influencer…
Video Creator…
Instagram Creator…
ಅಂತ ಕರೆಯುವುದು ಸೂಕ್ತ..

ಹಾಗೆಯೇ..
ಅವರುಗಳು ನೈಜ ಪತ್ರಿಕೋದ್ಯಮವನ್ನು ಮಾಡುತ್ತಿದ್ದರೆ..

ಅವರನ್ನು…

Digital Journalist…
Citizen Content Creator…
Video Journalist…
Citizen Journalist…
ಅಂತಾನೂ ಕರೆಯಬಹುದು.

error: Content is protected !!