ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಆದೇಶ-ನಾಯಿ….ಜೇನು ಇಟ್ಟಂತೆ..! ಅವೈಜ್ಞಾನಿಕ ಆದೇಶಕ್ಕೆ ಬಂಗ್ಲೆ ಮಲ್ಲಿಕಾರ್ಜುನ ಖಂಡನೆ

ಬೆಂಗಳೂರು : ರಾಜ್ಯದ 200 ತಾಲ್ಲೂಕುಗಳಲ್ಲಿ ಕೆಲಸ ಮಾಡುವ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಆಯಾ ಪತ್ರಿಕಾ ಸಂಸ್ಥೆಗಳು ಕಾಯಂ ನೇಮಕಾತಿ ಆದೇಶ ಪತ್ರ ಕೊಟ್ಟಿರುವುದಿಲ್ಲ.ಹೀಗಿರುವಾಗ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಸರ್ಕಾರದಿಂದ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು ರಾಜ್ಯದ ಪತ್ರಕರ್ತರಿಗೆ ಅಪಮಾನಿಸಿದಂತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಕಾಯಂ ಪತ್ರಕರ್ತರೆಂದು ನೇಮಕಾತಿ ಆದೇಶ ಕೊಟ್ಟಿಲ್ಲ.ಆದರೆ ಸರ್ಕಾರ ಈ ಆದೇಶ ಪ್ರತಿ ಕೇಳಿರುವುದು ಹಾಸ್ಯಾಸ್ಪದ ಸಂಗತಿಯಾಗಿದ್ದು ಈ ಬಗ್ಗೆ ಆದೇಶ ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯದ ಮಹಿಳೆಯರಿಗೆ ಬಸ್‌ಗಳಲ್ಲಿ ಸಂಚರಿಸಲು 1800 ಕೋಟಿ ರೂ.ವೆಚ್ಚವನ್ನು ನೀಡಿರುವ ಸರ್ಕಾರ ಯಾವುದೇ ಮಾನದಂಡಗಳನ್ನು ಕೇಳಿಲ್ಲ ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಸರ್ಕಾರದ ಯೋಜನೆಗಳ ಬಗ್ಗೆ ಸಮಾಜದಲ್ಲಿ ಜನರ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ವಿಷಯದಲ್ಲಿ ಮಾತ್ರ ಇಂತಹ ಧೋರಣೆ ತಳೆದಿರುವುದು ಸರಿಯಾದ ಕ್ರಮವಲ್ಲ ಎಂದು ಹರಿಹಾಯ್ದಿದ್ದಾರೆ.

ಸರ್ಕಾರ ಹೊರಡಿಸಿರುವ ಆದೇಶದಂತೆ ರಾಜ್ಯಾದ್ಯಂತ 100 ಅರ್ಜಿ ಸಲ್ಲಿಕೆ ಆದರೆ ಹೆಚ್ಚು ಎಂದಿರುವ ಬಂಗ್ಲೆ ಮಲ್ಲಿಕಾರ್ಜುನ , 5222 ಪತ್ರಕರ್ತರಲ್ಲಿ ಕಾಯಂ ನೇಮಕಾತಿ ಪತ್ರ ಎಷ್ಟು ಜನರ ಬಳಿ ಇದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಕೂಡಲೇ ಈ ಆದೇಶವನ್ನು ಮಾರ್ಪಡಿಸಿ ಗ್ರಾಮೀಣ ಪತ್ರಕರ್ತರಿಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸುವ ಕಾರ್ಯ ಮಾಡಬೇಕು.ಇಲ್ಲದಿದ್ದಲ್ಲಿ ಈ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಹಾಗೆಯೇ ಇದರ ವಿರುದ್ಧ ಹೋರಾಟವನ್ನು ಸಂಘಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಆದೇಶ ನಾಯಿ.. ಜೇನು ಇದ್ದಂತೆ ಅದು ಪೂಜೆಗೂ ಬರುವುದಿಲ್ಲ.ತಿನ್ನುವುದಕ್ಕೆ ಬರುವುದಿಲ್ಲ.ಆದರೆ ಸರ್ಕಾರ ಪತ್ರಕರ್ತರಿಗೆ ಬಸ್ ಪಾಸ್ ಕೊಟ್ಟಿರುವುದಾಗಿ ಬಡಾಯಿ ಕೊಚ್ಚಿಕೊಳ್ಳಲಿದೆ.ಪತ್ರಕರ್ತ ಕಿವಿ ಮೇಲೆ ಹೂ ಇಟ್ಟಂತಾಗಿದೆ ಎಂದು ಟೀಕಿಸಿದ್ದಾರೆ.

error: Content is protected !!