ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪರಿಹಾರ ಒದಗಿಸಲು ನಿಮ್ಮ ಧ್ವನಿಯಾಗಿ ಸರಕಾರದ ಗಮನ ಸೆಳೆಯುವೆ MLC ಸುನೀಲ್ ಗೌಡ ಪಾಟೀಲ್ ಭರವಸೆ

ವಿಜಯಪುರ : ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪರಿಹಾರ ಒದಗಿಸಲು ನಿಮ್ಮ ಧ್ವನಿಯಾಗಿ ಸರಕಾರದ ಗಮನ ಸೆಳೆಯುವುದಾಗಿ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.

 

ಇಂದು ಬುಧವಾರ ನಗರದಲ್ಲಿ ನಡೆದ ವಿಜಯಪುರ ತಾಲೂಕಿನಲ್ಲಿ ಬರುವ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

 

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಗೌರವಧನ ಕಡಿಮೆಯಿದ್ದು, ಈ ಸಮಸ್ಯೆಯ ಕುರಿತು ಹೋರಾಟ ನಡೆಸಿದ ಪರಿಣಾಮ ಗೌರವಧನವನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಪಿಂಚಣಿ, ಉಚಿತ ಬಸ್ ಪಾಸ್ ಮತ್ತು ಟೋಲ್ ಗಳಲ್ಲಿ ಶುಲ್ಕದಿಂದ ವಿನಾಯಿತಿ ನೀಡಲು ಕೂಡ ಸರಕಾರದ ಗಮನ ಸೆಳೆಯುತ್ತೇನೆ. ಜಲಜೀವನ ಮಿಷನ್ ಯೋಜನೆಯಲ್ಲಿ ಗ್ರಾ. ಪಂ. ಪಾಲಿನ ವಂತಿಗೆಯನ್ನು ಸರಕಾರವೇ ಭರ್ತಿ ಮಾಡಬೇಕು ಎಂದು ಹೋರಾಟ ನಡೆಸಿದ್ದು ಫಲ ನೀಡಿದ್ದು, ಸರಕಾರ ಸ್ಪಂದಿಸಿದೆ. ಈ ವಂತಿಗೆ ಹಣವನ್ನು ಗ್ರಾ. ಪಂ. ಗಳು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ ಎಂದು ಅವರು ಹೇಳಿದರು.

 

ಗ್ರಾ. ಪಂ. ಗಳಿಗೆ ನಾನಾ ವಸತಿ ಯೋಜನೆಗಳಡಿ ಮನೆ ಮಂಜೂರು ಮಾಡಿಸಲು ಹೋರಾಟ ಮಾಡಿದ ಪರಿಣಾಮ ಈಗ ಮನೆಗಳು ಲಭ್ಯವಾಗಿವೆ. ಈಗ ನಾನಾ ಗ್ರಾ. ಪಂ. ಗಳಲ್ಲಿ ನಾನಾ ಕಾರಣಗಳಿಂದ ಬ್ಲಾಕ್ ಆಗಿರುವ ಮನೆಗಳ ಮಾಹಿತಿ ನೀಡಿದರೆ ಸ್ಥಳೀಯ ಮತ್ತು ಸರಕಾರದ ಮಟ್ಟದಲ್ಲಿ ಗಮನ ಸೆಳೆದು ಪರಿಹರಿಸುತ್ತೇನೆ. ವಿಧಾನ ಪರಿಷತ ಶಾಸಕರಿಗೆ ಸಿಗುವ ಅನುದಾನ ಕಡಿಮೆಯಿದ್ದು, ಈ ಅನುದಾನವನ್ನು ವಿಜಯಪುರ ಮತ್ತು ಬಾಗಲಕೋಟೆ ಎರಡೂ ಜಿಲ್ಲೆಗಳ ಎಲ್ಲ 15 ವಿಧಾನ ಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ವರ್ಷದಲ್ಲಿ ಒಂದು ಬಾರಿ ವಿಧಾನ ಸಭೆ ಕ್ಷೇತ್ರವಾರ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆ ನಡೆಸಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಹಲವು ಸಮಸ್ಯೆಗಳಿಗೆ ಆಯಾ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುತ್ತಿದ್ದೇನೆ. ಈ ಸಭೆಯ ಜೊತೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನೂ ನಡೆಸಿ ಅವರ ಅಹವಾಲನ್ನೂ ಕೂಡ ಆಲಿಸುತ್ತಿದ್ದೇನೆ. ಪಿಡಿಓಗಳ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ನಡೆದಿದೆ. ಒಟ್ಟಾರೆ ನಿಮ್ಮೆಲ್ಲರ ಧ್ವನಿಯಾಗಿ ಸರಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

 

ವಿಜಯಪುರ- ಬಾಗಲಕೋಟೆ- ಬೆಂಗಳೂರು ಹೊಸದಾಗಿ ವಂದೇ ಭಾರತ ರೈಲು ಮತ್ತು ಮುಂಬಯಿ- ಸೋಲಾಪುರ ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದು ಕಾರ್ಯಸಾಧುವಲ್ಲ ಎಂದು ಕೇಂದ್ರ ರೇಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈಗಲಾದರೂ ವಿಜಯಪುರ ಮತ್ತು ಬಾಗಲಕೋಟೆ ಸಂಸದರು ವಂದೇ ಭಾರತ ರೈಲು ಸೇವೆ ಪ್ರಾರಂಭಿಸಿದರೆ ಅವರಿಗೆ ಸಾರ್ವಜನಿಕರ ಪರವಾಗಿ ನಾಗರಿಕ ಸನ್ಮಾನ ಮಾಡುತ್ತೇನೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

 

ವಿಜಯಪುರ ತಾ. ಪಂ. ಕಾರ್ಯ ನಿರ್ವಾಹಣಾಧಿಕಾರಿ ಬಾಬು ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.

 

ಕನ್ನೂರ ಗ್ರಾ. ಪಂ. ಸದಸ್ಯ ಎಂ. ಎಚ್ ಪಠಾಣ, ಐನಾಪುರ ಗ್ರಾ. ಪಂ. ಸದಸ್ಯೆ ಜಯಶ್ರೀ ಜಾಧವ ತಮ್ಮ ಅಭಿಪ್ರಾಯ ಹಂಚಿಕೊಂಡರು.

 

ತಾ. ಪಂ. ಸಹಾಯಕ ನಿರ್ದೇಶಕ ಬಾಬು ಉಮದಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಜಾಬಗೊಂಡ ನಿರೂಪಿಸಿದರು. ಪಿಡಿಓ ಎಸ್. ಆರ್. ಕಟ್ಟಿ ವಂದಿಸಿದರು.

 

ಅಹವಾಲು ಸಭೆಯಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಗ್ರಾ. ಪಂ. ಸದಸ್ಯರಿಂದ ಅಹವಾಲು ಸ್ವೀಕರಿಸಿದರು.

 

ವರದಿ : ದೌಲಪ್ಪ ಮನಗೋಳಿ

error: Content is protected !!