ಔರಾದ್ : ಸಾಮಾಜಿಕ ಕ್ರಾಂತಿಯ ಹರಿಕಾರ, ರಾಜ್ಯದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಸರಕಾರದ ಆದೇಶದಂತೆ ತಾಲೂಕು ಆಡಳಿತ ವತಿಯಿಂದ ಏ.30ರಂದು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ತಹಸೀಲ್ದಾರ ಮಹೇಶ ಪಾಟೀಲ್ ಅಧ್ಯಕ್ಷತೆಯಲ್ಲಿ ಬುಧವಾರ ಪಟ್ಟಣದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಬಸವ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ವಚನಗಳ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರ ಸಂದೇಶಗಳು ಪ್ರತಿಯೊಬ್ಬರಿಗೂ ತಲುಪುವಂತಾಗಲು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು , ವಿವಿಧ ಸಮಾಜಗಳು, ಸಂಘಟನೆಗಳ ಸಹಕಾರ ಅಗತ್ಯ ಎಂದು ತಹಸೀಲ್ದಾರ ಹೇಳಿದರು.
ಅಂದು ಬೆಳಗ್ಗೆ 8ಗಂಟೆಗೆ ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭವಾಗಲಿದ್ದು, ಮುಖ್ಯರಸ್ತೆಯ ಮಾರ್ಗದಲ್ಲಿ ನಡೆದು ವೇದಿಕೆಗೆ ತಲುಪಲಿದೆ. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ನೀರು, ಉಪಹಾರದ ವ್ಯವಸ್ಥೆ ಮಾಡಿಸುತ್ತೇವೆ ಎಂದು ಅವರು ಹೇಳಿದರು. ಸಮಾಜದ ಹಿರಿಯ ಮುಖಂಡರಾದ ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಪ್ರಕಾಶ ಘೂಳೆ ಮಾತನಾಡಿ, ಬಸವಣ್ಣನ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದ್ದರು. ಆದ್ದರಿಂದ ಎಲ್ಲಾ ಸಮಾಜದವರನ್ನು ಆಹ್ವಾನಿಸಬೇಕೆಂದು ಹೇಳಿದರು.
ಬಸವಣ್ಣನವರ ವಚನ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಬೇಕು, ಕಲಾತಂಡಗಳನ್ನು ಆಹ್ವಾನಿಸಬೇಕು. ಜತೆಗೆ ವಚನ, ಪ್ರಬಂಧದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಬೇಕೆಂದು ಮನವಿ ಮಾಡಿದರು.
ಶರಣಪ್ಪ ಪಾಟೀಲ್, ಅನಿಲ ಹೇಡೆ ಮಾತನಾಡಿ, ಬಸವ ಜಂಯತಿ ಪೂರ್ವಭಾವಿ ಸಭೆಯಲ್ಲಿ ಅನೇಕ ಅಧಿಕಾರಿಗಳು ಗೈರಾಗಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಕಚೇರಿಯ ಸಿಬ್ಬಂದಿಗಳಿಗೆ ಕಳುಹಿಸಿದ್ದಾರೆ. ಕುಡಲೇ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸಭೆಯಲ್ಲಿ ಪಾಲ್ಗೊಂಡ ಜನರು ಧ್ವನಿಜೋಡಿಸಿದರು. ಗೈರಾದ ಅಧಿಕಾರಿಗಳ ಮೆಲೆ ಕ್ರಮ ಜರುಗಿಸಲಾಗುತ್ತದೆ. ಅಲ್ಲದೇ ಸಿಬ್ಬಂದಿಗಳಿಗೆ ಕಳುಹಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ತಹಸೀಲ್ದಾರ ಮಹೇಶ ಪಾಟೀಲ್ ಭರವಸೆ ನೀಡಿದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಚನ್ನಪ್ಪ ಉಪ್ಪೆ, ರಾಮಣ್ಣ ವಡಿಯಾರ್, ಡಾ. ಪೈಯಾಜ್, ಚಂದು ಘೂಳೆ, ಆನಂದ ದ್ಯಾಡೆ, ವಿರೇಶ ಮೀಸೆ, ಎಇಇ ರವಿ ಕಾರಬಾರಿ, ಟಿಎಚ್ ಒ ಗಾಯತ್ರಿ, ಸಿಡಿಪಿಒ ಇಮಲಪ್ಪ, ಕೃಷಿ ಸಹಾಯಕ ನಿರ್ದೇಶಕ ಧೂಳಪ್ಪ, ಎಡಿ ಲಕ್ಷ್ಮೀ, ಮಾಣಿಕ ನೇಳಗೆ, ವಿರೇಶ ಅಲಮಾಜೆ, ಶರಣಪ್ಪ ನಾಗಲಗಿದ್ದೆ, ಅನಿಲ ಜಿರೋಬೆ, ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ಬಾಲಾಜಿ ಅಮರವಾಡಿ, ಬಾಲಾಜಿ ದಾಮಾ, ಶಂಕರ ತಿಮ್ಮಾ, ಗಣೇಶ ಭಾಲ್ಕೆ ಸೇರಿದಂತೆ ಅನೇಕರಿದ್ದರು.
ವರದಿ : ರಾಚಯ್ಯ ಸ್ವಾಮಿ