ಚಿತ್ತಾಪುರ; ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ತಾಲೂಕಿನ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಕರೆ ನೀಡಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನದಂತೆ ರೈತರಿಗೆ ಕಡಲೆ, ಜೋಳ ಹಾಗೂ ಶೇಂಗಾ ಬೀಜ ವಿತರಣೆ ಮಾಡಲಾಗುತ್ತದೆ ಹೀಗಾಗಿ ರೈತರು ರಿಯಾಯಿತಿ ಬೀಜ ತೆಗೆದುಕೊಂಡು ಬಿತ್ತನೆ ಕಾರ್ಯಕ್ಕೆ ಮುಂದಾಗಿ ಎಂದು ಕಿವಿಮಾತು ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಮಾತನಾಡಿ, ರೈತರಿಗೆ ಯಾವುದೇ ತೊಂದರೆಯಾಗದಂತೆ ಕಾಲ ಕಾಲಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಆದ್ದರಿಂದ ಎಲ್ಲಾ ರೈತರು ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿಕ ಸಮಾಜದ ಸದಸ್ಯ ಬಾಬು ಕಾಶಿ ಮಾತನಾಡಿ, ಪ್ರಕೃತಿ ವಿಕೋಪ ಅದು ದೇವರ ಸೃಷ್ಟಿ ಏನು ಮಾಡುವುದಕ್ಕೆ ಆಗುವುದಿಲ್ಲ ಹೀಗಾಗಿ ಯಾವ ರೈತರೂ ಯಾವುದೇ ಅನಾಹುತಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂ ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನದಂತೆ 2025-26 ನೇ ಸಾಲಿನ ಹಿಂಗಾರು ಹಂಗಾಮಿಗೆ ಕೃಷಿ ಇಲಾಖೆ ಚಿತ್ತಾಪುರ ವತಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವದಿಲ್ಲಾ, ಪ್ರಸ್ತುತ ಚಿತ್ತಾಪುರ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಂಡಿದ್ದು ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ರೈತರು ಕೆಲ ಅಂಶಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲಾ ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರಿದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೆಕು, ರೈತರು ಬಿತ್ತನೆಗೆ ಮುಂಚಿತವಾಗಿ ಕಡ್ಡಾಯವಾಗಿ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಹಾಗೂ ರೈತರು ಕಡ್ಡಾಯವಾಗಿ ಪರವಾನಿಗೆ ಹೋಂದಿದ ಅದಿಕೃತ ಮಾರಾಟಗಾರರಿಂದ ಮಾತ್ರ ಕೃಷಿ ಪರಿಕರಗಳನ್ನು ಖರೀಧಿಸಬೇಕು ಎಂದು ಹೇಳಿದರು.
ಸತ್ಯನಾರಾಯಣ ಯಾದವ್, ರೈತ ಸಂಘದ ಅಧ್ಯಕ್ಷ ಮೌನೇಶ್ ಭಂಕಲಗಿ, ಶ್ಯಾಮರಾವ ಸಂಗಾವಿ, ಬಸವರಾಜ ಕಾಳಗಿ, ನಾಗರಾಜ ಹೂಗಾರ, ಕೃಷಿ ಅಧಿಕಾರಿಗಳಾದ ರವಿಂದ್ರ ಕುಮಾರ, ಕರಣ ಕುಮಾರ, ಶ್ರಿನಿವಾಸ, ಬಸವರಾಜ ಬಂಗರಗಿ, ಲೆಕ್ಕ ಸಹಾಯಕ ರಾಮು ರಾಠೋಡ, ಸಚಿನ ಕುಮಾರ ಸೇರಿದಂತೆ ವಿವಿಧ ಗ್ರಾಮದ ರೈತರು ಇದ್ದರು.