ಬೆಂಗಳೂರು: ಮಧ್ಯ ಏಷ್ಯಾ ಯುದ್ಧದ ಪರಿಣಾಮ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೂ ಭಾರೀ ಹೊಡೆತ ನೀಡಿದ್ದು, ಎಲ್‌ಪಿಜಿ ಕೊರತೆಯಿಂದ ಮೂರು ವಾರಗಳಲ್ಲಿ ಸುಮಾರು 150 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿಸಿ ರಾವ್ ಅವರು ಮಾತನಾಡಿ, “ಮಾರ್ಚ್ 7–8ರಿಂದ ಆರಂಭವಾದ ಎಲ್‌ಪಿಜಿ ಕೊರತೆ ಹೋಟೆಲ್‌ಗಳ ದೈನಂದಿನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದು, ಪ್ರತಿ ವಾರ ಸುಮಾರು ರೂ.50 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
ಎಲ್‌ಪಿಜಿ ಕೊರತೆಯಿಂದ ಅನೇಕ ಹೋಟೆಲ್‌ಗಳು ತನ್ನ ಕಾರ್ಯಾಚರಣೆಯನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ಕೆಲವು ಹೋಟೆಲ್‌ಗಳು ಮೆನುಗಳನ್ನು ಸೀಮಿತಗೊಳಿಸಿದರೆ, ಇನ್ನೂ ಕೆಲವು ಇಂಧನದ ಪರ್ಯಾಯ ಮಾರ್ಗಗಳನ್ನು ಬಳಸಲು ಆರಂಭಿಸಿವೆ. ಇಂಡಕ್ಷನ್ ಸ್ಟೌವ್, ಡೀಸೆಲ್ ಆಧಾರಿತ ಅಡುಗೆ ವ್ಯವಸ್ಥೆಗಳು, ಕೆಲವೆಡೆ ಮರದ ಇಂಧನ ಬಳಸುವ ಪರಿಸ್ಥಿತಿ ಎದುರಾಗಿದೆ.
ಇದಲ್ಲದೆ, ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ವಿಶೇಷವಾಗಿ ಚೈನೀಸ್ ಹಾಗೂ ಬಿರಿಯಾನಿ ತಿನಿಸುಗಳಿಗೆ ಹೆಸರಾದ ಹೋಟೆಲ್‌ಗಳು ಹೆಚ್ಚು ನಷ್ಟ ಅನುಭವಿಸಿವೆ ಎಂದು ತಿಳಿಸಿದ್ದಾರೆ.
ಸೋಮವಾರದಿಂದ ಭಾಗಶಃ ಎಲ್‌ಪಿಜಿ ಸರಬರಾಜು ಪುನರಾರಂಭವಾಗುವ ಸಾಧ್ಯತೆ ಇದ್ದು, ಹೋಟೆಲ್‌ಗಳಿಗೆ ಸಾಮಾನ್ಯ ಎಲ್‌ಪಿಜಿ ಪೂರೈಕೆಯಲ್ಲಿ ಸುಮಾರು ಶೇ. 50 ರಷ್ಟು ಸುಧಾರಣೆಗಳು ಕಂಡು ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ಮುಬಾರಕ್ ಬೆಂಗಳೂರು
