ತಂದೆ ಬಯಸಿದ್ದು ಮಗ ಸೈನಿಕನಾಗಬೇಕೆಂದು.. ‘ಆರ್ಮಿ ಟ್ರೈನಿಂಗ್’ಗೆ ಹೋಗುತ್ತೇನೆ’ ಎಂದು ಅಪ್ಪನಿಗೆ ಸುಳ್ಳು ಹೇಳಿ ಕ್ರಿಕೆಟ್ ಆಡಿದ ಮಗ ಕ್ರಿಕೆಟ್ ಸೈನಿಕನಾದ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯದಲ್ಲಿ ಕಾಶ್ಮೀರದ ಮಧ್ಯಮ ವೇಗಿ ರಸಿಕ್ ಸಲಾಂ ಧರ್ ಪಾತ್ರ ದೊಡ್ಡದು.

ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್’ವುಡ್ ನೆರಳಿನಲ್ಲಿ ಮರೆಯಾದ ರಸಿಕ್ ಧರ್ ಆರ್.ಸಿ.ಬಿ ತಂಡದ unsung ಹೀರೋ..

ಫೈನಲ್’ನಲ್ಲಿ 3 ವಿಕೆಟ್ ಸೇರಿದಂತೆ 12 ಪಂದ್ಯಗಳಲ್ಲಿ 19 ವಿಕೆಟ್’ಗಳು. ಕ್ವಾಲಿಫೈಯರ್ ಪಂದ್ಯದಲ್ಲಿ ಇದೇ ಗುಜರಾತ್ ವಿರುದ್ಧ ‘ಡಬಲ್ ವಿಕೆಟ್ ಮೇಡನ್ ಓವರ್’.

ಇನ್ನಿಂಗ್ಸ್’ನ ಮಧ್ಯದ ಓವರ್’ಗಳಲ್ಲಿ ಕೃಣಲ್ ಪಾಂಡ್ಯ ಜೊತೆ ಆರ್.ಸಿ.ಬಿ ಯಶೋಗಾಥೆಗೆ ಕಾರಣ ರಸಿಕ್ ಧರ್.

ರಸಿಕ್ ಸಲಾಂ ಧರ್ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಶ್ಮುಜಿ ಎಂಬ ಸಣ್ಣ ಹಳ್ಳಿಯವನು. ನಗರದಿಂದ ತುಂಬಾ ದೂರದಲ್ಲಿದ್ದ ಹಳ್ಳಿ. ತಂದೆ ಅಬ್ದುಲ್ ಸಲಾಂ ಧರ್ ಅರೆಕಾಲಿಕ ಶಾಲಾ ಶಿಕ್ಷಕ..ಇವರದ್ದೂ ಕೆಳ ಮಧ್ಯಮ ವರ್ಗದ ಕುಟುಂಬಗಳ ಕಥೆ. ಸುಲಭವಿರಲಿಲ್ಲ ಆ ಹಳ್ಳಿ ಜೀವನ.. ಮನೆಮಗನನ್ನು ಭಾರತೀಯ ಸೇನೆಗೆ ಸೇರಿಸಲು ಮುಂದಾಗಿದ್ದರು ತಂದೆ.

ಅಪ್ಪನ ಮಾತಿಗೆ ಎದುರಾಡದ ಮಗ ‘’ಸೇನೆಗೆ ಸೇರುತ್ತೇನೆ.. ಆದರೆ ಅದಕ್ಕೂ ಮೊದಲು ಟ್ರೈನಿಂಗ್ ಅವಶ್ಯಕತೆಯಿದೆ.. ಟ್ರೈನಿಂಗ್’ಗೆ ಶ್ರೀನಗರಕ್ಕೆ ಹೋಗಬೇಕಿದೆ’’ ಎಂದು ಬಿಟ್ಟ.

ರಸಿಕ್ ಧರ್ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ.. ಸೇನೆಗೆ ಸೇರುವೆನೆಂದು ಮಗ ಹೇಳಿದ್ದನ್ನು ಕೇಳಿ ತಂದೆ ಹಿರಿಹಿರಿ ಹಿಗ್ಗಿ ಬಿಟ್ಟರು. ಹಳ್ಳಿಯಿಂದ 80 ಕಿ.ಮೀ ದೂರದಲ್ಲಿದ್ದ ಶ್ರೀನಗರಕ್ಕೆ ಆರ್ಮಿ ಟ್ರೈನಿಂಗ್’ಗೆಂದು ಮಗನನ್ನು ಕಳುಹಿಸಲಾರಂಭಿಸಿದರು.

ಪ್ರತೀ ದಿನ ಶ್ರೀನಗರಕ್ಕೆ ಹೋಗುತ್ತಿದ್ದ ರಸಿಕ್ ಧರ್ ಟ್ರೈನಿಂಗ್ ನಡೆಸುತ್ತಿದ್ದ. ಆದರೆ ಅದು ಆರ್ಮಿ ಟ್ರೈನಿಂಗ್ ಆಗಿರಲಿಲ್ಲ.. ಬದಲಾಗಿ ಕ್ರಿಕೆಟ್ ಟ್ರೈನಿಂಗ್.. ‘ಸೇನಾ ತರಬೇತಿಗೆ ಹೋಗುತ್ತಿದ್ದೇನೆ’ ಎಂದು ಸುಳ್ಳು ಹೇಳಿ ಅಪ್ಪನನ್ನು ನಂಬಿಸಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದ ರಸಿಕ್ ಧರ್.

ಸೆರಗಲ್ಲಿ ಕಟ್ಟಿಕೊಂಡ ಸುಳ್ಳು ಸುಡದೇ ಇರಲು ಹೇಗೆ ಸಾಧ್ಯ..? ಕ್ರಿಕೆಟ್’ಗಾಗಿ ಮಗ ಕಟ್ಟಿದ್ದ ಸುಳ್ಳಿನ ಕೋಟೆ ಕುಸಿದು ಬೀಳುತ್ತಿದ್ದಂತೆ ಅಪ್ಪ ರೌದ್ರಾವತಾರ ತಾಳಿ ಬಿಟ್ಟಿದ್ದರು. ಆಗ ಅಪ್ಪ-ಮಗನ ಮಧ್ಯೆ ನಿಂತವರು ತಾಯಿ.
ಮಗನ ಆಸೆ, ಕನಸಿಗೆ ತಾಯಿ ಒತ್ತಾಸೆಯಾಗಿ ನಿಂತು ಬಿಟ್ಟರು. ಹೀಗೆ ಕ್ರಿಕೆಟ್ ಆಡಿದವನು ರಸಿಕ್ ಸಲಾಂ ಧರ್.

ಕಾಶ್ಮೀರಿ ಹುಡುಗನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು 2018ರಲ್ಲಿ ಜಮ್ಮು-ಕಾಶ್ಮೀರ ತಂಡದ ಮೆಂಟರ್-ಪ್ಲೇಯರ್ ಆಗಿ ಬಂದ ಇರ್ಫಾನ್ ಪಠಾಣ್. ಅಲ್ಲಿಂದ ಐಪಿಎಲ್.
ಮುಂಬೈ ಇಂಡಿಯನ್ಸ್’ನ scouting team ಕಣ್ಣಿಗೆ ಬಿದ್ದ ರಸಿಕ್ ಧರ್ 17ನೇ ವರ್ಷದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದ. ಒಂದು ಬ್ರೇಕ್’ನ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದವನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 6 ಕೋಟಿಗೆ ಖರೀದಿಸಿದಾಗ ‘ಇವನಿಗೆ ಆರು ಕೋಟಿಯೇ’ ಎಂದು ಹಲವರ ಹುಬ್ಬೇರಿತ್ತು.

ಈಗಲೂ ಅವರು ಹುಬ್ಬೇರಿಸಿಯೇ ಇದ್ದಾರೆ.. ಆದರೆ ಅದು ರಸಿಕ್ ಸಲಾಂ ಧರ್’ನ ಸಾಧನೆಗಾಗಿ.

error: Content is protected !!