ತುಮಕೂರು: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ, ಜೂನ್ 2ರಂದು (ನಾಳೆ) ತುಮಕೂರು ಮಹಾನಗರ ಪಾಲಿಕೆ ಮುಂಭಾಗ ಜಿಲ್ಲಾ ಎನ್ಎಸ್ಯುಐ (NSUI) ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷರಾದ ಮುರುಳಿಧರ ಹಾಲಪ್ಪ, “ಇಂದಿನ ಯುವಪೀಳಿಗೆಯಲ್ಲಿ ಸಾಮಾಜಿಕ ಕಳಕಳಿ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಯಬೇಕಿದೆ. ದೇಶದಲ್ಲಿ ಲಕ್ಷಾಂತರ ಯುವಜನರು ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಜನತೆ ತಮ್ಮ ಹಕ್ಕುಗಳಿಗಾಗಿ ಪ್ರಶ್ನೆ ಕೇಳುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಮುನ್ನಡೆಯಬೇಕು” ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ:
“ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ, ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದಾಗಿ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ. ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಅವರು ತೀವ್ರವಾಗಿ ಟೀಕಿಸಿದರು.
ಜಾತಿ-ಧರ್ಮದ ಹೆಸರಲ್ಲಿ ವಿಭಜನೆ ರಾಜಕಾರಣ:
“ಕೇಂದ್ರ ಸರ್ಕಾರ ಹಾಗೂ ಆರ್ಎಸ್ಎಸ್ ದೇಶದ ಯುವಜನರಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜನೆ ಸೃಷ್ಟಿಸಲು ಯತ್ನಿಸುತ್ತಿವೆ. ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಬಗೆಹರಿಸುವ ಬದಲು ಇಂತಹ ದ್ವೇಷದ ನೀತಿಯನ್ನು ಅನುಸರಿಸಲಾಗುತ್ತಿದೆ” ಎಂದು ಮುರುಳಿಧರ ಹಾಲಪ್ಪ ಆಪಾದಿಸಿದರು.
ಒಗ್ಗಟ್ಟಿನ ಪ್ರತಿಭಟನೆಗೆ ಕರೆ:
ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯಲಿರುವ ಈ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು, ಯುವಜನರು ಪಕ್ಷಾತೀತವಾಗಿ, ಒಗ್ಗಟ್ಟಿನಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ಮುಖಂಡರಾದ ಚಂದ್ರಶೇಖರ್ ಗೌಡ, ಗಂಗಾಧರ್ ರಾಜು, ಕೀರ್ತಿ ಗಣೇಶ್ ಸೇರಿದಂತೆ ಜಿಲ್ಲಾ ಎನ್ಎಸ್ಯುಐನ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ನಾಗರಾಜ್ (ಕೆ.ಕಲ್ಲಹಳ್ಳಿ)
