ಸುಂಟಾಣ ತಾಂಡಾದಲ್ಲಿ 8 ದಿನದಿಂದ ನೀರಿಗಾಗಿ ಪರದಾಟ

ಕಾಳಗಿ: ತಾಲೂಕಿನ ಕೊಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಟಾಣ ತಾಂಡಾದಲ್ಲಿ ಕಳೆದ 8 ದಿನಗಳಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ.

60 ಮನೆಗಳಿರುವ ತಾಂಡಾಕ್ಕೆ ಹುಲಸಗೂಡ ಕ್ರಾಸ್‌ನಿಂದ ನೀರು ಪೂರೈಕೆಯಾಗುತ್ತಿತ್ತು. ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ತಾಂಡಾದಲ್ಲಿ ಮೂರು ನೀರಿನ ಸಂಪರ್ಕಗಳಿದ್ದರೂ ಒಂದರಲ್ಲೂ ನೀರು ಬರುತ್ತಿಲ್ಲ. ಜನರು ಹಾಗೂ ಜಾನುವಾರುಗಳು ನೀರಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

3 ಕಿ.ಮೀ ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ ಇದೆ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಗಮನಹರಿಸುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಒ, ಅಧಿಕಾರಿಗಳಿಗೆ ಅಂಗಲಾಚಿದರೂ ಸ್ಪಂದನೆಯೇ ಇಲ್ಲ ಎಂದು ಮಹಿಳೆಯರು ಖಾಲಿ ಕೊಡಗಳೊಂದಿಗೆ ರಸ್ತೆಗಿಳಿದು ಆಕ್ರೋಶ ಹೊರಹಾಕಿದರು. ಕೂಡಲೇ ಟ್ಯಾಂಕರ್ ವ್ಯವಸ್ಥೆ ಮಾಡದಿದ್ದರೆ ಗ್ರಾಪಂಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರೇಮಾ ಜಾಧವ್, ಲಕ್ಷ್ಮೀ ಸಂತೋಷ್, ವಿಮಲಾಬಾಯಿ, ಗೋಪಾಲ್, ಹಿಂದಿಬಾಯಿ ದೇವಜಿ, ಅನಿತಾ ಪಾಂಡು, ಸಾಕುಬಾಯಿ ಜಯರಾಂ, ಜಾಲಬಾಯಿ, ರಾಮಚಂದ್ರ, ರಾಮಕಾಬಾಯಿ, ಅನುಸೂಯಬಾಯಿ, ಭಾವನಸಿಂಗ್ ಸೇರಿ ಇತರರು ಇದ್ದರು.

ವರದಿ: ರಮೇಶ್ ಎಸ್ ಕುಡಹಳ್ಳಿ

error: Content is protected !!