ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ಹುಮನಾಬಾದ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮಕ್ಕೆ SBI ಬ್ಯಾಂಕ್ ಮ್ಯಾನೇಜರ್ ಪ್ರಭಾಕರ ಖಂಡಗೊಂಡ ಉದ್ಘಾಟಕರಾಗಿ ಆಗಮಿಸಿದ್ದರೆ, ಮುಖ್ಯ ಅತಿಥಿಗಳಾಗಿ ಬಸವಕಲ್ಯಾಣ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಹ್ಲಾದ ಚೆಂಗಟೆ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಬಲೀರಾಂ ಹುಡೆ ವಹಿಸಿದ್ದರು.

ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರು, ಮೋಚಿ ವೃತ್ತಿಯ ಮಹಿಳೆಯರು, ಯಶಸ್ವಿ ರೈತರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, KEB ಮೀಟರ್ ರೀಡರ್‌ಗಳನ್ನು ವೇದಿಕೆಗೆ ಕರೆದು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಡಾ. ಪ್ರಹ್ಲಾದ ಚೆಂಗಟೆ ಮಾತನಾಡಿ, ಭಗತ್ ಸಿಂಗ್ ಅವರ ದೇಶಭಕ್ತಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜದ ಎಲ್ಲರಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದನ್ನು ವಿವರಿಸಿದರು. ಇಂದು ಮಹಿಳೆಯರು, ದಲಿತರು, ಹಿಂದುಳಿದವರು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿರುವುದಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದರು.

ನಿವೃತ್ತ ಸೈನಿಕ ವಿಜಯಕುಮಾರ್ ಪರಶೆಟ್ಟಿ ಮಾತನಾಡಿ ನಮಗಾಗಿ ಬದುಕುವುದಲ್ಲ, ದೇಶದ ಒಳಿತಿಗಾಗಿ ಬದುಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಬಲೀರಾಂ ಹುಡೆ ಅವರು, “ಬಲಗೈಯಲ್ಲಿ ದಾನ ಮಾಡಿದ್ದು ಎಡಗೈಗೆ ತಿಳಿಯಬಾರದು” ಎಂಬಂತೆ ನಿಸ್ವಾರ್ಥ ಕಾಯಕ ಪ್ರಚಾರಕ್ಕಾಗಿ ಇರಬಾರದು. ವೇದಿಕೆಯಲ್ಲಿರುವ ಸೈನಿಕರು, ಪೌರಕಾರ್ಮಿಕರು, ರೈತರು ಎಲೆಮರೆಕಾಯಿಯಂತೆ ದುಡಿಯುತ್ತಿದ್ದಾರೆ. ಅವರೆಲ್ಲರ ಶ್ರಮದಿಂದಲೇ ನಮ್ಮ ಬದುಕು ಉಜ್ವಲ. ಅವರಂತೆ ನಿಸ್ವಾರ್ಥ ಸೇವೆ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!