ಬೆಳಗಾವಿ ಕಳೆದ ಕೆಲವು ದಿನಗಳಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ತೀವ್ರ ಹೋರಾಟಕ್ಕೆ ಬುಧವಾರ ರಾತ್ರಿ ನಡೆದ ಸಭೆಯಲ್ಲಿ ತಾರ್ಕಿಕ ಅಂತ್ಯ ಸಿಕ್ಕಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದೀರ್ಘ ಸಂಧಾನ ಸಭೆಯ ಬಳಿಕ, ಪ್ರಸಕ್ತ ಹಂಗಾಮಿನ ಕಬ್ಬಿಗೆ ಪ್ರತಿ ಟನ್‌ಗೆ ₹3,600 ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.
ರೈತರ ನಿಲುವು ಏನು?
ರೈತ ಮುಖಂಡರಾದ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ್ ಗುರೂಜಿ ನೇತೃತ್ವದ ರೈತ ಸಂಘಟನೆಗಳು, ಸದ್ಯಕ್ಕೆ ಕಾರ್ಖಾನೆಗಳು ಆರಂಭವಾಗಿ ಕಬ್ಬು ನುರಿಸುವಿಕೆ ಸುಗಮವಾಗಿ ನಡೆಯಲಿ ಎಂಬ ಕಾರಣಕ್ಕೆ ಈ ₹3,600 ದರಕ್ಕೆ ತಾತ್ಕಾಲಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.
ಆದರೆ, “ಇದು ಕೇವಲ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಲು ನೀಡಿದ ಒಪ್ಪಿಗೆಯಾಗಿದ್ದು, ರೈತರ ಎಲ್ಲಾ ಬೇಡಿಕೆಗಳು ಈಡೇರಿದಂತಲ್ಲ, ಹೋರಾಟಗಳು ಮುಂದುವರಿಯಲಿವೆ” ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಶರತ್ತುಬದ್ಧ ಒಪ್ಪಿಗೆ:
ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಅಥವಾ ಕಬ್ಬಿನ ದರವನ್ನು ಹೆಚ್ಚಿಸಿದರೆ, ಸಕ್ಕರೆ ಕಾರ್ಖಾನೆಗಳು ಅದರ ಲಾಭವನ್ನು ರೈತರಿಗೆ ಹಂಚಬೇಕು ಮತ್ತು ಹೆಚ್ಚುವರಿ ದರ ನೀಡಬೇಕು ಎಂಬ ಶರತ್ತಿನ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ.
ಈ ದರ ನಿಗದಿಯ ಒಪ್ಪಂದದ ಹಿನ್ನೆಲೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಗುರುವಾರದಿಂದಲೇ ಕಬ್ಬು ನುರಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತಿವೆ.
ಸದ್ಯಕ್ಕೆ ಸಂಘರ್ಷಕ್ಕೆ ಸೌಹಾರ್ದಯುತ ತೆರೆ ಬಿದ್ದಿದ್ದು, ₹3,600 ದರ ಅಧಿಕೃತವಾಗಿದೆ.
ಬಾಕ್ಸ್ ಚುನಪ್ಪ ಪೂಜೇರಿ ಫೋಟೋ ಶಶಿಕಾಂತ್ ಗುರೂಜಿ ಫೋಟೋ
ಒಪ್ಪಂದದ ಸಾರಾಂಶ
> ದರ: ಪ್ರತಿ ಟನ್‌ಗೆ ₹3,600
> ಅನ್ವಯ: ಬೆಳಗಾವಿ ಜಿಲ್ಲೆಗೆ ಮಾತ್ರ
> ಕಾರ್ಖಾನೆ ಆರಂಭ: ಗುರುವಾರದಿಂದ
> ರೈತರ ಶರತ್ತು: MSP ಹೆಚ್ಚಾದರೆ ಹೆಚ್ಚುವರಿ ದರ ರೈತರಿಗೆ ಸಿಗಬೇಕು
> ರೈತರ ಸ್ಪಷ್ಟನೆ: ಇದು ತಾತ್ಕಾಲಿಕ ಒಪ್ಪಿಗೆ ಮಾತ್ರ, ಹೋರಾಟ ಮುಂದುವರಿಯುತ್ತೆ
