ಹುಕ್ಕೇರಿ: ಸರ್ವಧರ್ಮಿಯರ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವ-2024ಕ್ಕೆ ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ದಸರಾ ಉತ್ಸವ ಸಮಿತಿಯು ಈ ಬಾರಿಯ ದಸರಾ ಉತ್ಸವವನ್ನು ಸ್ಮರಣೀಯಗೊಳಿಸಲು ನಾನಾ ಸಿದ್ಧತೆಗಳೊಂದಿಗೆ ಸಿದ್ಧಗೊಳ್ಳುತ್ತಿದೆ. ಉತ್ಸವದ ಮೆರುಗು ಹೆಚ್ಚಿಸಲು ಭರ್ಜರಿ ತಯಾರಿ ನಡೆದಿದೆ.
ಮೈಸೂರು ಮಾದರಿಯಲ್ಲಿ ಪ್ರತಿ ವರ್ಷ ನಡೆಯುವ ಹುಕ್ಕೇರಿ ದಸರಾ ಉತ್ಸವವು ಕಿತ್ತೂರು ಕರ್ನಾಟಕದಲ್ಲಿಯೇ ಹಲವು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ಅದರಲ್ಲೂ ಈ ಸಲದ ಉತ್ಸವದಲ್ಲಿ ಭಾಗವಹಿಸುವವರು 9 ದಿನಗಳ ಕಾಲವೂ ಹೋಳಿಗೆ ಊಟ ಸವಿಯಲಿದ್ದಾರೆ.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿದ ಈ ದಸರಾ ಉತ್ಸವದಲ್ಲಿ ಪ್ರಕೃತಿ ಆರಾಧಿಸುವ ಮತ್ತು ಪ್ರಾಚೀನ ಪರಂಪರೆಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಶುದ್ಧ ನೀರು, ಶುದ್ಧ ಆಹಾರ, ಶುದ್ಧ ವಿಚಾರ, ಶುದ್ಧ ಮನಸ್ಸು ಎಂಬ ವಿಭಿನ್ನ ಕಾರ್ಯಕ್ರಮ ರೂಪಿಸಲಾಗಿದೆ.
ದಸರಾ ಉತ್ಸವ ನಡೆಯಲಿರುವ ಹಿರೇಮಠದ ಸುತ್ತಮುತ್ತಲಿನ ಪ್ರದೇಶ, ಮಠದ ಪ್ರಾಂಗಣ ಅಲಂಕೃತಗೊಂಡಿದೆ. ರಾಜಬೀದಿಗಳು, ಪ್ರಮುಖ ವೃತ್ತಗಳನ್ನು ಶೃಂಗರೀಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಇದರೊಂದಿಗೆ ಪಟ್ಟಣ ಪ್ರವೇಶಿಸುವ ಮುಖ್ಯ ಮಾರ್ಗಗಳಲ್ಲಿ ಸ್ವಾಗತ ಕಮಾನಗಳನ್ನು ಅಳವಡಿಕೆ ಕಾರ್ಯ ನಡೆಯುತ್ತಿದೆ.
ಅ. 3 ರಿಂದ ಅ.12ರ ವರೆಗೆ ನಡೆಯಲಿರುವ ದಸರಾ ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮುಖ್ಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಜೊತೆಗೆ ಪಟ್ಟಣದ ವಿವಿಧ ಕಡೆಗಳಲ್ಲಿ ನಾನಾ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ವೈಭವ ಮೇಳೈಸಲಿದೆ. ಜೊತೆಗೆ ಕುಣಿತ, ಹಾಸ್ಯ, ನೃತ್ಯದ ಸೊಬಗು ಕಾಣಲಿದೆ.
ಈ ದಸರಾ ಉತ್ಸವದಲ್ಲಿ ರೈತ, ಯುವ, ಮಹಿಳಾ, ಆರೋಗ್ಯ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಹುಕ್ಕೇರಿ ಪ್ರವಾಸೋದ್ಯಮಕ್ಕೆ ಚಿಗುರು ಮೂಡಿಬರುವ ಆಶಾಭಾವ ತಂದಿದೆ.
ವರದಿ : ಸದಾನಂದ ಎಂ