ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಬರುವ ನಾಗೂರ(ಬಿ) ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ 220 ಕೆ.ವಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ತನಿಖೆ ನಡೆಸುವಂತೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಇಂಧನ ಸಚಿವರಾದ ಕೆ.ಜೆ ಜಾರ್ಜ್ ರವರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಶಾಸಕರು, ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿರುವ ಔರಾದ(ಬಿ) ತಾಲ್ಲೂಕು ಮಹಾರಾಷ್ಟç-ತೆಲಂಗಾಣಾ ಗಡಿಭಾಗದಲ್ಲಿದ್ದು, ನಂಜುAಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ನಾಗೂರ(ಬಿ) ಗ್ರಾಮದಲ್ಲಿ 118 ಕೋಟಿ ವೆಚ್ಚದಲ್ಲಿ ಹೊಸದಾಗಿ 220 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದಿದ್ದಾರೆ.
ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಿಂದ ಈ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು. ಪ್ರಪ್ರಥಮ ಬಾರಿಗೆ ನನ್ನ ಮತಕ್ಷೇತ್ರದಲ್ಲಿ 220 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಆದರೆ ಅಂದಾಜು ಪಟ್ಟಿಯಂತೆ ಕೆಲಸ ಆಗುತ್ತಿಲ್ಲ. ಕಾಮಗಾರಿಯಲ್ಲಿ ಬೇಕಾಗಿರುವ ಹೊಸ ಉಪಕರಣಗಳ ಬದಲಾಗಿ ಹಳೆಯದಾದ ಉಪಕರಣಗಳನ್ನು ಉಪಯೋಗಿಸಲಾಗುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಲಸ ಕಳಪೆಯಾಗಿರುವುದರಿಂದ ಸಣ್ಣ ಪುಟ್ಟ ಕಾರ್ಖಾನೆಗಳನ್ನು ಆರಂಭಿಸಲು ತೊಂದರೆಯಾಗುತ್ತದೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಗುತ್ತಿಗೆ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿವೆ. ಈ ಹಿಂದೆಯೇ ಕಾಮಗಾರಿಯ ಗುಣಮಟ್ಟ ಸರಿಯಾಗಿ ಆಗುತ್ತಿಲ್ಲವೆಂದು ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇನ್ನಾದರೂ ನಾಗೂರ(ಬಿ) ವಿದ್ಯುತ್ ಉಪ ಕೇಂದ್ರ ಕಾಮಗಾರಿಯ ಬಗ್ಗೆ 3ನೇ ಪಾರ್ಟಿಯಿಂದ ತನಿಖೆ ನಡೆಸಲು ಆದೇಶಿಸಬೇಕೆಂದು ಕೋರಿದ್ದಾರೆ.
ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸಾಕಷ್ಟು ಪರಿಶ್ರಮ ವಹಿಸುತ್ತಿದ್ದೇನೆ. ಇದಕ್ಕೆ ಮುಖ್ಯವಾಗಿ ಬೇಕಿರುವ ರಸ್ತೆ, ವಿದ್ಯುತ್, ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದಿರುವ ಅವರು, ನಾಗೂರ(ಬಿ) ಉಪ ಕೇಂದ್ರ ಕಾಮಗಾರಿ ಸ್ಥಳಕ್ಕೆ ಈ ಹಿಂದೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಕೆಲಸ ಸರಿಯಾಗಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಯಾವುದೇ ಕ್ರಮವಾಗದ ಕಾರಣ ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ