ಫೆ.12ರಿಂದ ಉದ್ಭವಲಿಂಗ ಅಮರೇಶ್ವರ ಜಾತ್ರೆ ಆರಂಭ

ಪಟ್ಟಣ ಸಿಂಗರಿಸಲು ಶಾಸಕ ಪ್ರಭು ಚವ್ಹಾಣ ಸೂಚನೆ

ಔರಾದನಲ್ಲಿ ಫೆ.12ರಿಂದ ಆರಂಭವಾಗಲಿರುವ ಐತಿಹಾಸಿಕ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆಕರ್ಷಕವಾಗಿ ಸಜ್ಜುಗೊಳಿಸಲು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದರು.

ಜಾತ್ರೆ ಹಿನ್ನೆಲೆ ಔರಾದ(ಬಿ) ತಾಲ್ಲೂಕು ಪಂಚಾಯತ ಕಛೇರಿಯಲ್ಲಿ ಗುರುವಾರ ಪೂರ್ವಸಿದ್ಧತಾ ಸಭೆ ನಡೆಸಿ ಜಾತ್ರೆಯ ಪೂರ್ವಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.

ಮುಖ್ಯ ರಸ್ತೆ, ದೇವಾಲಯ ಸುತ್ತಮುತ್ತ, ಪಲ್ಲಕ್ಕಿ ಮೆರವಣಿಗೆ ನಡೆಯುವ ಬೀದಿಗಳು, ಅಂಗಡಿ ತುಂಬುವ ಸ್ಥಳಗಳು, ಪ್ರಮುಖ ವೃತ್ತಗಳು ಸೇರಿದಂತೆ ಇಡೀ ಪಟ್ಟಣವನ್ನು ಸ್ವಚ್ಛಗೊಳಿಸಬೇಕು. ಫಾಗಿಂಗ್ ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಎಲ್ಲ ರಸ್ತೆ ಮತ್ತು ಚರಂಡಿಗಳು ಶುಚಿಯಾಗಬೇಕು. ಮುಖ್ಯಾಧಿಕಾರಿ, ಹೆಲ್ತ್ ಇನ್ಸ್‌ಪೆಕ್ಟರ್ ಹಾಗೂ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳೀಯವಾಗಿ ಲಭ್ಯವಿದ್ದು ಸ್ವಚ್ಛತಾ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಹೇಳಿದರು.

ಬೀದಿ ದೀಪಗಳು, ಹೈಮಾಸ್ಟ್ ದೀಪಗಳನ್ನು ಪರಿಶೀಲಿಸಿ ಎಲ್ಲವನ್ನು ಸರಿಪಡಿಸಬೇಕು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕುಡಿಯುವ ನೀರು, ಬೆಳಕು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಉದ್ಭವಲಿಂಗ ಅಮರೇಶ್ವರ ದೇವಸ್ಥಾನ ಐತಿಹಾಸಿಕ ಮಹತ್ವ ಹೊಂದಿದ್ದು, ಇಲ್ಲಿ ಶರಣಾಗುವ ಎಲ್ಲ‌ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಹಾಗಾಗಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ತೆಲಂಗಾಣದಿಂದಲೂ ಬಹಳಷ್ಟು ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುವುದರಿಂದ ಯಾರೊಬ್ಬರಿಗೂ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಆಕರ್ಷಕ ಸ್ವಾಗತ ಕಮಾನುಗಳು, ವಿದ್ಯುತ್ ಅಲಂಕಾರ ಹಾಗೂ ಧ್ವಜಪತಾಕೆಗಳ ಮೂಲಕ ಸಿಂಗರಿಸಬೇಕು ಎಂದು ತಿಳಿಸಿದರು.

ಭಕ್ತರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ಅಗ್ನಿಶಾಮಕ ದಳ ಜಾಗೃತವಾಗಿರಬೇಕು. ಆರೋಗ್ಯ ಇಲಾಖೆ ಎಂಬ್ಯುಲೆನ್ಸ್ ಮತ್ತು ಸಿಬ್ಬಂದಿಯೊಂದಿಗೆ ಸಜ್ಜಾಗಿರಬೇಕು. ಜೆಸ್ಕಾಂ‌ ಅಧಿಕಾರಿಗಳು ವಿದ್ಯುತ್ ತಂತಿಗಳನ್ನು ಸರಿಪಡಿಸಿ ವಿದ್ಯುತ್ ಕೊರತೆಯಾಗದಂತೆ ಮತ್ತು ವಿದ್ಯುತ್ ಅವಘಡಗಳಿಗೆ ಆಸ್ಪದ ನೀಡದಂತೆ ವ್ಯವಸ್ಥೆ ಮಾಡಿಕೊಳ್ಳಬೇಕಂದು ಹೇಳಿದರು.

ಉದ್ಭವಲಿಂಗ ಅಮರೇಶ್ವರ ಜಾತ್ರೆ ಔರಾದ(ಬಿ) ತಾಲೂಕಿನ ಗೌರವದ ಹಬ್ಬವಾಗಿದ್ದು, ಜಾತ್ರಾ ಮಹೋತ್ಸವ ಸಮಿತಿಯಲ್ಲಿ ಎಲ್ಲ ಅಧಿಕಾರಿಗಳನ್ನು ಸೇರಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕು. ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕೆಂದು ಶಾಸಕರು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗಾಯತ್ರಿ, ಜೆಸ್ಕಾಂ ಸಹಾಯಕ ಕಾರ್ಯಪಾಲಕ‌ ಅಭಿಯಂತರ ರವಿ ಕಾರಬಾರಿ, ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!