ರಾಜ್ಯದಲ್ಲಿ ಆನ್ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಬೀದರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು
ನಮ್ಮ ಕರ್ನಾಟಕ ಸೇನೆಯಿಂದ ಮುಖ್ಯಮಂತ್ರಿಗೆ ಮನವಿ ಪತ್ರ
ಆನ್ಲೈನ್ ಜೂಜು ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ
ಬೀದರ್: ಆನ್ಲೈನ್ ಜೂಜು ಹಾಗೂ ಬೆಟ್ಟಿಂಗ್ ನಿಷೇಧಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ಗಳು ರಾಜ್ಯದಲ್ಲಿ ಅನೇಕ ಅನಾಹುತಗಳಿಗೆ ಕಾರಣವಾಗುತ್ತಿವೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಹೇಳಿದರು.
ಯುವಕರು ಹಾಗೂ ವಿದ್ಯಾರ್ಥಿಗಳು ಜೂಜಿನ ಸ್ವರೂಪದ ಆನ್ಲೈನ್ ಆಟಗಳ ದಾಸರಾಗುತ್ತಿದ್ದಾರೆ. ಅನೇಕರು ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಕುಟುಂಬಗಳು ಬೀದಿಗೆ ಬಂದಿವೆ ಎಂದು ತಿಳಿಸಿದರು.
ಉನ್ನತ ವ್ಯಾಸಂಗಕ್ಕೆ ನಗರ, ಪಟ್ಟಣಗಳಿಗೆ ಹೋಗುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಆನ್ಲೈನ್ ಆಟಗಳ ಚಟಕ್ಕೆ ಬಿದ್ದು, ಸರಿಯಾಗಿ ವಿದ್ಯಾಭ್ಯಾಸ ಮಾಡದೆ, ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶ, ಅಸ್ಸಾಂ, ಸಿಕಕಿಂ, ಮೇಘಾಲಯ, ನಾಗಾಲ್ಯಾಂಡ್, ಓರಿಸ್ಸಾ ರಾಜ್ಯಗಳಲ್ಲಿ ಆನ್ಲೈನ್ ಆಟಗಳನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲೂ ಆನ್ಲೈನ್ ಆಟದ ಆ್ಯಪ್ಗಳನ್ನು ನಿಷೇಧಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸರ್ಕಾರ 15 ದಿನಗಳ ಒಳಗೆ ಬೇಡಿಕೆಗೆ ಸ್ಪಂದಿಸದಿದ್ದರೆ ಸೇನೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಬಿರಾದಾರ, ಪ್ರಧಾನ ಸಂಚಾಲಕ ಸುಧಾಕರ ರಾಠೋಡ್, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಸವರಾಜ ಕಾರಬಾರಿ, ಬೀದರ್ ತಾಲ್ಲೂಕು ಅಧ್ಯಕ್ಷ ಅನಿಲ್ ರಾಜಗೀರಾ, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ಸಚಿನ್ ತಿಪಶೆಟ್ಟಿ, ಬೀದರ್ ನಗರ ಘಟಕದ ಅಧ್ಯಕ್ಷ ಸಂತೋಷ ಪಾಟೀಲ, ಪ್ರಮುಖರಾದ ರಾಮಶೆಟ್ಟಿ ಹುಣಜಿ, ಸುದೀಪ್ ತೂಗಾವೆ, ಲೋಕೇಶ್ ಪಾಟೀಲ, ದತ್ತು ಗಿರಿ, ಅಜೀಮ್ ಪಟೇಲ್, ಸಂತೋಷ್ ನಾಯಕ್, ಸಿದ್ಧಾರ್ಥ ಕಾಂಬಳೆ, ರವಿ ಪಾಟೀಲ, ಸಾಯಿಪ್ರಸಾದ್ ತಾಂದಳೆ, ಇದ್ರಜೀತ್ ಬಂಬುಳಗಿ, ರವಿ ಪಾಟೀಲ ಮತ್ತಿತರರು ಇದ್ದರು.