Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

ಇಸ್ಲಾಮಾಬಾದ್:‌ ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯ ತೀವ್ರ ಹೆಚ್ಚಳವಾಗಿದ್ದು, ಮನುಷ್ಯರ ಆರೋಗ್ಯಕ್ಕೆ ಹಾನಿಕಾರಕ ಎಂದು ಎಚ್ಚರಿಕೆ ನೀಡಿದೆ. ಆದರೆ ಪಾಕಿಸ್ತಾನದ ಸ್ಥಿತಿ ಇನ್ನೂ ಗಂಭೀರವಾಗಿದೆ. ಹೌದು ಪಾಕಿಸ್ತಾನದಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಅನಾಹುತಕಾರಿ ಮಟ್ಟಕ್ಕೆ ತಲುಪಿರುವುದಾಗಿ ವರದಿ ತಿಳಿಸಿದೆ

ಪಾಕಿಸ್ತಾನದ ಲಾಹೋರ್‌ ಮತ್ತು ಮುಲ್ತಾನ್‌ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 2,000ಕ್ಕೆ ತಲುಪಿದ್ದು, ಇದು ಅತ್ಯಂತ ಕಳಪೆ ಮಟ್ಟದ ವಾಯುಗುಣ ಮಟ್ಟವಾಗಿದೆ ಎಂದು ವರದಿ ವಿವರಿಸಿದೆ.
ಕಳಪೆ ವಾಯು ಗುಣಮಟ್ಟದಿಂದ ಕಂಗಾಲಾಗಿರುವ ಪಾಕ್‌ ಪ್ರಾಂತೀಯ ಸರ್ಕಾರ ಲಾಕ್‌ ಡೌನ್‌ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಮನುಷ್ಯನ ಆರೋಗ್ಯಕ್ಕೆ ವಿಷಕಾರಿಯಾಗಿರುವ ವಾಯುಗುಣಮಟ್ಟ ನಿಯಂತ್ರಿಸುವ ನಿಟ್ಟಿನಲ್ಲಿ ಪಾಕ್‌ ನ ಪಂಜಾಬ್‌ ಸರ್ಕಾರ ಲಾಹೋರ್‌ ಮತ್ತು ಮುಲ್ತಾನ್‌ ನಗರಗಳಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ ಡೌನ್‌ ಘೋಷಿಸಿದೆ.

ಎಲ್ಲಿಯವರೆಗೆ ವಾಯುಮಾಲಿನ್ಯದ ಗುಣಮಟ್ಟ ಅಪಾಯಕಾರಿಯಾಗಿ ಇರುತ್ತದೋ ಅಷ್ಟು ದಿನಗಳ ಕಾಲ ಲಾಕ್‌ ಡೌನ್‌ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ವಾಯುಮಾಲಿನ್ಯದ ಗುಣಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಲಿದ್ದಾರೆ ಎಂದು ವರದಿ ವಿವರಿಸಿದೆ.
ಒಂದು ವೇಳೆ ವಾಯುಮಾಲಿನ್ಯದ ಗುಣಮಟ್ಟ ಸುಧಾರಣೆಯಾಗದಿದ್ದಲ್ಲಿ ಲಾಕ್‌ ಡೌನ್‌ ಕೂಡಾ ಮುಂದುವರಿಯಲಿದೆ. ಈ ಕಠಿಣ ಕ್ರಮದಿಂದಾಗಿ ಹೊರಗಡೆ ಚುಟುವಟಿಕೆಗೆ ಕಡಿವಾಣ ಬೀಳುವುದರ ಜೊತೆಗೆ, ವಿಷಕಾರಿ ಗಾಳಿಯ ಪ್ರಮಾಣ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಹದಗೆಟ್ಟ ವಾಯುಮಾಲಿನ್ಯದಿಂದಾಗಿ ಜನಸಂಖ್ಯೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಹಲವು ಜನರು ಈಗಾಗಲೇ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!