ಗಂಗಾವತಿ: ವರದಕ್ಷಣೆ ಹಣ ತರದಿದ್ದದ್ದಕ್ಕೆ ಮನೆಗೆ ಬೀಗ ಹಾಕಿ, ಪತ್ನಿಯನ್ನು ಮನೆ ಮುಂದೆ ಬಿಟ್ಟು, ಪತಿ ಹಾಗೂ ಸಂಬಂಧಿಕರು ಪರಾರಿಯಾಗಿದ್ದು, 2 ದಿನಗಳಿಂದ ಬೀಗ ಹಾಕಿದ ಮನೆಯ ಮುಂದೆ ಪತ್ನಿ ಹಾಗೂ ಆಕೆಯ ತಂದೆ-ತಾಯಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಪ್ರಕರಣ ಗಂಗಾವತಿಯ ಜುಲೈ ನಗರದ ಈರಣ್ಣ ಗುಡಿ ಪಕ್ಕದಲ್ಲಿ ನಡೆಯುತ್ತಿದೆ.
ಪತಿಯ ಧೋರಣೆ ಖಂಡಿಸಿ, ಬೀಗ ಹಾಕಿದ ಮನೆಯ ಮುಂದೆ ಧರಣಿ ಮಾಡುತ್ತಿರುವ ಆಂಧ್ರಪ್ರದೇಶದ ರಾಯದುರ್ಗಾ ಮೂಲದ ಶಾಂತಿ ಹಾಗೂ ಜುಲೈ ನಗರದ ಮಂಜು ಬಿದರೂರು ಎಂಬವರ ಮದುವೆ ಕಳೆದ ವರ್ಷ ನವೆಂಬರ್ 19 ರಂದು ನಡೆದಿತ್ತು.
ಈ ಮಧ್ಯೆ ಮದುವೆ ಸಂದರ್ಭದಲ್ಲಿ ಜುಲೈ ನಗರದ ಈರಣ್ಣ ಗುಡಿ ಪಕ್ಕದ ಮನೆ ಮಂಜು ಬಿದರೂರು ಅವರ ಹೆಸರಿನ ದಾಖಲೆಯನ್ನು ವಧು ನೋಡಲು ಹೋದ ಸಂದರ್ಭದಲ್ಲಿ ತೋರಿಸಿ ಹುಡುಗ ಮಾನ್ವಿ ಸಹಕಾರಿ ಬ್ಯಾಂಕಿನ ಉದ್ಯೋಗಿ ಎಂದು ಹೇಳಿ ಮದುವೆ ಮಾಡಕೊಂಡಿದ್ದರು.
ಆ ನಂತರ ನಿರಂತರವಾಗಿ 25 ಲಕ್ಷ ರೂ.ಗಳನ್ನು ವರದಕ್ಷಿಣೆ ತರಬೇಕು. ಇಲ್ಲದಿದ್ದರೆ ತವರು ಮನೆಯಲ್ಲಿರುವಂತೆ ಪತ್ನಿಗೆ ಹೊಡೆದು ಬಡಿದು, ನಿತ್ಯ ಕಿರುಕುಳ ನೀಡಿ, ಪತಿ ಹಾಗೂ ಪತಿಯ ಅಣ್ಣನ ಹೆಂಡತಿ ಕಿರುಕುಳ ನೀಡುತ್ತಿದ್ದಾರೆ.
ಈ ಕುರಿತು ಸಮಾಜದ ದೈವಕ್ಕೆ ಮನವಿ ಮಾಡಿಕೊಂಡ ಸಂದರ್ಭದಲ್ಲಿ ರಾಜಿ ಪಂಚಾಯಿತಿ ನಡೆಸಿ ಬುದ್ಧಿ ಮಾತು ಹೇಳಿದರೂ ಪತ್ನಿಯ ಮೇಲೆ ಪತಿ ಹಾಗೂ ಆತನ ತಾಯಿ, ಅಣ್ಣನ ಹೆಂಡತಿಯ ಕಿರುಕುಳ ಮಿತಿ ಮೀರಿದೆ
ಮದುವೆಯಾಗಿ ವರ್ಷ ತುಂಬುವ ಸಂದರ್ಭದಲ್ಲಿ ತವರು ಮನೆಗೆ ಉಡಿ ತುಂಬುವ ಕಾರ್ಯ ಮಾಡಿಕೊಂಡು ಬರಲು ಪತ್ನಿ ರಾಯದುರ್ಗಕ್ಕೆ ಹೋಗಿ ಬಂದಿದ್ದು, ನ.18 ಸೋಮವಾರ ಬೆಳಿಗ್ಗೆ ಸುಮಾರು 10.30ಕ್ಕೆ ಮನೆಗೆ ಬಂದಾಗ ಮನೆಗೆ ಬೀಗ ಹಾಕಿ ಪತಿ ಕುಟುಂಬದವರು ನಾಪತ್ತೆಯಾಗಿದ್ದರು.
ಈ ಕುರಿತು ಮೊಬೈಲ್ ಕರೆ ಮಾಡಿ ಪತಿಯನ್ನು ವಿಚಾರಿಸಿದಾಗ 25 ಲಕ್ಷ ತಂದರೆ ಮಾತ್ರ ಮನೆಗೆ ಪ್ರವೇಶ. ಇಲ್ಲದಿದ್ದರೆ ಮತ್ತೇ ತವರು ಮನೆಗೆ ಹೋಗುವಂತೆ ತಿಳಿಸಿದಾಗ ಪತ್ನಿ ಶಾಂತಿ ಹಾಗೂ ಆಕೆಯ ಅಪ್ಪ,ಅಮ್ಮ ಅಳಿಯನ ಮನೆ ಮುಂದೆ ನ.18ರ ಸೋಮವಾರ ಬೆಳಿಗ್ಗೆ 10.30 ರಿಂದ ಧರಣಿ ನಡೆಸುತ್ತಿದ್ದಾರೆ.
ಪ್ರಕರಣ ಕುರಿತು ಪೊಲೀಸ್ ಇಲಾಖೆಯ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಠಾಣೆಗೆ ಆಗಮಿಸಿ ದೂರು ನೀಡುವಂತೆ ಸೂಚನೆ ನೀಡಿದ್ದು, ಕೇಸ್ ಕೊಡುವುದಾಗಿ ಧರಣಿ ನಿರತ ಪತ್ನಿ ಶಾಂತಿ ತಿಳಿಸಿದಿದ್ದಾರೆ.