ಹುಕ್ಕೇರಿ: ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಏಜೆಂಟರ ಹಾವಳಿ ಮಿತಿಮೀರಿದ್ದು, ಇದರಿಂದ ಅಮಾಯಕ ಸರ್ಕಾರಿ ನೌಕರರು ಬಲಿಯಾಗುತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗೆ ಡಿ ದರ್ಜೆ ನೌಕರರಾದ ಮಲ್ಲು ಮುಗಳಕೋಡ ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಹಾಗೂ ಆಧಾರರಹಿತವಾಗಿವೆ ಎಂಬುದು ತಿಳಿದು ಬಂದಿದೆ.
ಗಮನಾರ್ಹ ಅಂಶವೆಂದರೆ, ಹುಕ್ಕೇರಿ ತಾಲೂಕು ದಂಡಾಧಿಕಾರಿಗಳ ಕಚೇರಿಯ ಕುರಿತು ವರ್ಷದಲ್ಲಿ ಒಂದೇ ದಿನ ಮಾತ್ರ ಇಂತಹ ಸುದ್ದಿಗಳು ಪ್ರಕಟವಾಗುತ್ತಿದ್ದು, ಅದೂ ಸಹ ಹೊಸ ಪಡಿತರ ಚೀಟಿ ಪ್ರಾರಂಭವಾಗುವ ಸಮಯದಲ್ಲೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಸ್ಥಳೀಯ ಪ್ರಜ್ಞಾವಂತರ ಪ್ರಕಾರ, ಹೊಸ ಪಡಿತರ ಚೀಟಿ ಆರಂಭವಾಗಲಿರುವ ಸಂದರ್ಭದಲ್ಲಿ ಕೆಲವು ಆನ್‌ಲೈನ್ ಸೆಂಟರ್‌ಗಳು, ಏಜೆಂಟರು ಹಾಗೂ ಕೆಲವರು ಪತ್ರಕರ್ತರ ಹೆಸರಿನಲ್ಲಿ ಅಮಾಯಕ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಈ ರೀತಿಯ ಸುಳ್ಳು ಸುದ್ದಿಗಳನ್ನು ಸೃಷ್ಟಿಸಲಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಇದೇ ಮಾದರಿಯ ಸುದ್ದಿಗಳು ಪ್ರಕಟವಾಗಿದ್ದು, ಅವೆಲ್ಲವೂ ಹೊಸ ಪಡಿತರ ಚೀಟಿ ಪ್ರಕ್ರಿಯೆ ಆರಂಭದ ಅವಧಿಯಲ್ಲೇ ನಡೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇತರೆ ಸಮಯಗಳಲ್ಲಿ ಯಾವುದೇ ರೀತಿಯ ದೂರುಗಳು ಅಥವಾ ಸುದ್ದಿಗಳು ಕಾಣಿಸದಿರುವುದು ಈ ಸಂಚಿನ ಗಂಭೀರತೆಯನ್ನು ತೋರಿಸುತ್ತದೆ.
ಹೊಸ ಪಡಿತರ ಚೀಟಿ ಪ್ರಕ್ರಿಯೆ ಆರಂಭವಾದಾಗ ಆಹಾರ ಇಲಾಖೆಯ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ, ಖಾಸಗಿ ವ್ಯಕ್ತಿಗಳು, ಏಜೆಂಟರು ಹಾಗೂ ಮಧ್ಯವರ್ತಿಗಳ ದರ್ಬಾರ್ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಾರ್ಥ ಸಾಧನೆಗಾಗಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ, ಅಮಾಯಕ ಸರ್ಕಾರಿ ನೌಕರರನ್ನು ಮಾನಸಿಕವಾಗಿ ಹಿಂಸಿಸುವುದು ಸರಿಯಲ್ಲ. ಸಮಾಜದಲ್ಲಿ ಅನೇಕ ನೈಜ ಸಮಸ್ಯೆಗಳಿದ್ದರೂ ಅವುಗಳತ್ತ ಗಮನ ಹರಿಸದೇ, ಕೇವಲ ವೈಯಕ್ತಿಕ ಲಾಭಕ್ಕಾಗಿ ಸುದ್ದಿಗಳನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ಸದಾನಂದ ಎಂ
