ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜನವರಿ 2 ರಿಂದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಗ್ರಾಮ ಸಂಚಾರ ನಡೆಸುವರು.
ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಆಲಿಸಬೇಕೆಂಬ ಉದ್ದೇಶದಿಂದ 2009ರಿಂದ ಪ್ರತಿ ವರ್ಷ ಗ್ರಾಮ ಸಂಚಾರ ಮಾಡುತ್ತಾ ಬರುತ್ತಿದ್ದೇನೆ. ಇದೀಗ ಹೊಸ ವರ್ಷದ ಆರಂಭದೊಂದಿಗೆ ಗ್ರಾಮ ಸಂಚಾರ ನಡೆಸುತ್ತಿದ್ದು, ಜನರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತದೆ. ಅಲ್ಲದೇ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ರಾಮ ಸಂಚಾರದಲ್ಲಿ ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುತ್ತಾರೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಪಡಿತರ ವಿತರಣೆಯಲ್ಲಿ ಸಮಸ್ಯೆ, ವಿಕಲಚೇತನರ ಕುಂದುಕೊರತೆಯಂತಹ ವಿವಿಧ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾರೆ.
ಶಿಕ್ಷಣ, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ, ಜಲ ಜೀವನ್ ಮಿಷನ್(ಜೆಜೆಎಂ) ನಂತಹ ಪ್ರಗತಿ ಹಂತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೇ ಕೃಷಿ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಳಗೊಂಡು ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳಲಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿದೆ. ಶಾಲೆ-ಕಾಲೇಜು, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯಿತಿ, ಆಸ್ಪತ್ರೆ, ಪಶು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ವೀಕ್ಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ನಾನು ಶಾಸಕನಾಗಿ ಮತ್ತು ಸಚಿವನಾಗಿ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಜನತೆಯ ನಿರೀಕ್ಷೆಯಂತೆ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುತ್ತಿದ್ದೇನೆ. ಜನರ ಹಿತವೇ ನನ್ನ ಪರಮ ಉದ್ದೇಶವಾಗಿದೆ. ಔರಾದ(ಬಿ) ವಿಧಾನಸಭಾ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಯಾಗಬೇಕು. ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ಬದಲಾಗಬೇಕು ಎಂಬುದು ನನ್ನ ಮಹಾ ಸಂಕಲ್ಪವಾಗಿದೆ. ಈ ದಿಶೆಯಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರುತ್ತಿದ್ದೇನೆ.
ಸಾರ್ವಜನಿಕರು ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಸಲ್ಲಿಸಬೇಕು. ಯಾವುದಾದರೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬಗ್ಗೆ ದೂರುಗಳಿದ್ದಲ್ಲಿ ಗಮನಕ್ಕೆ ತರಬೇಕು. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಯಾವುದೇ ಹಿಂಜರಿಕೆಯಿಲ್ಲದೇ ತಿಳಿಸಬೇಕು. ತಾವು ಭೇಟಿ ನೀಡಿದ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸಿ ಗ್ರಾಮ ಸಂಚಾರ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಶಾಸಕರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ವರದಿ : ರಾಚಯ್ಯ ಸ್ವಾಮಿ