BJP 12 ವರ್ಷಗಳಿಂದ ತುಕ್ಕು ಹಿಡಿದಿದ್ದ ಪ್ರಕರಣಕ್ಕೆ ಜೀವ ನೀಡಿದೆ: ಸಚಿವ ಮಧು

ಮಂಡ್ಯ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ದುರುದ್ದೇಶದಿಂದ ಬಿಜೆಪಿಯವರು ಹೊಟ್ಟೆ ಕಿಚ್ಚಿನಿಂದ ಕಳೆದ 12 ವರ್ಷಗಳಿಂದ ತುಕ್ಕು ಹಿಡಿದಿದ್ದ ಪ್ರಕರಣಕ್ಕೆ ಜೀವ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಎ ಅಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಇಂಡಿಯನ್ ಇನ್ಸಿಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಜೇಷನ್ ಹಾಗೂ ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಅಧ್ಯಾಪನ ವಿಜ್ಞಾನೋತ್ಸವ 2024 ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯವರು ರಾಜಭವನವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹಿಂದೆ ದೇವರಾಜು ಅರಸು, ವೀರಪ್ಪ ಮೊಯ್ಲಿ, ಧರಂಸಿಂಗ್ ಅವರಂಥವರು ರಾಜ್ಯವನ್ನು ಆಳಿದ್ದಾರೆ. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಈ ರೀತಿಯ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಜನರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೇಳಿದಂತೆ ಮಹಿಳೆಯರಿಗೆ 2 ಸಾವಿರ ಕೊಡುತ್ತಿದ್ದಾರೆ. ಜೊತೆಗೆ ಗ್ಯಾರಂಟಿಗಳನ್ನು ಜಾರಿ ಮಾಡಿರುವುದರಿಂದ ಬಿಜೆಪಿಯವರಿಗೆ ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗುತ್ತಿಲ್ಲ. ನಾಳೆ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ನಮ್ಮ ಜತೆಗೆ ಮಾಧ್ಯಮದವರು ಬರಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ನಿಮ್ಮನ್ನು ತೆಗೆದು ಬಿಡುತ್ತಾರೆ ಎಂದ ಅವರು, ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಕುಮಾರಸ್ವಾಮಿ ಅವರು ಮಾತನಾಡಿದ್ದಕ್ಕೆಲ್ಲ ಉತ್ತರ ಕೊಡುವ ಅವಶ್ಯಕತೆ ಇಲ್ಲ ತಿಳಿಸಿದರು.

ಹಿಂದಿನ ಸರ್ಕಾರ ರಾಜ್ಯದ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿಲ್ಲ. ನಾವು ಬಂದ ಕೂಡಲೇ ಶಾಲೆಗಳ ಆಧುನೀಕರಣ ಹಾಗೂ 12 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೇವೆ. ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಹಾಲು, ಮೊಟ್ಟೆ, ಬಿಸಿಯೂಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.