ಬೆಂಗಳೂರು : ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸೀರೆ ಅಂಗಡಿಯೊಂದರ ಮಾಲೀಕರಾದ ಪಿರಾದುದಾರರು ದಿನಾಂಕ:21/09/2025 ರಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಸೀರೆ ಅಂಗಡಿಯಲ್ಲಿ ಓರ್ವ ಮಹಿಳೆಯು ಸೀರೆ ಬಂಡಲ್‌ನ್ನು ಕಳವು ಮಾಡಿಕೊಂಡು ಹೋಗುತ್ತಿರುವ ಸಮಯದಲ್ಲೇ, ಅಂಗಡಿಯ ಮಾಲೀಕರು ಆಕೆಯನ್ನು ಹಿಡಿದು ಸೀರೆ ಬಂಡಲ್ ಸಮೇತ ಆಕೆಯನ್ನು ಸಿಟಿ ಮಾರ್ಕೆಟ್ ಪೊಲೀಸರ ವಶಕ್ಕೆ ಒಪ್ಪಿಸಿ ದೂರನ್ನು ಸಲ್ಲಿಸಿರುತ್ತಾರೆ. ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಆರೋಪಿತೆಯನ್ನು ಪ್ರಶ್ನಿಸಲಾಗಿ ಆಕೆಯು ಸೀರೆ ಬಂಡಲ್‌ನ್ನು ಕಳವು ಮಾಡಿದ ಬಗ್ಗೆ ತಪ್ಪೋಪ್ಪಿಕೊಂಡಿದ್ದು, ನಂತರ ಆಕೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಮುಂದುವರೆದು, ಸೀರೆ ಅಂಗಡಿಯ ಮಾಲೀಕನು, ಸೀರೆ ಕಳವು ಮಾಡಿದ ಮಹಿಳೆಯು ಮತ್ತೆ ಸಿಕ್ಕಿದಾಗ ಸಮಯದಲ್ಲಿ ಆಕೆಯ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿ ಹಲ್ಲೆಮಾಡಿರುತ್ತಾನೆ. ಈ ಹಲ್ಲೆ ಮಾಡುವ ಸಮಯದಲ್ಲಿ ಓರ್ವ ಅಪರಿಚಿತ ವ್ಯಕ್ತಿಯು ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿರುತ್ತಾನೆ.
ಈ ಘಟನೆಗೆ ಸಂಬಂಧಪಟ್ಟಂತೆ, ಕಳುವು ಮಾಡಿದ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಅಂಗಡಿಯ ಮಾಲೀಕ ಮತ್ತು ಸಹಾಯಕನ ವಿರುದ್ಧ ದಿನಾಂಕ:25/9/2025 ರಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಹಲ್ಲೆ ಮಾಡಿರುವ ಆರೋಪಿಗಳಾದ ಅಂಗಡಿಯ ಮಾಲೀಕನನ್ನು ಮತ್ತು ಸಹಾಯಕನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ತನಿಖೆ ಪ್ರಗತಿಯಲ್ಲಿರುತ್ತದೆ.
ವರದಿ : ಮುಬಾರಕ್ ಬೆಂಗಳೂರು