14ಲಕ್ಷ ಮೌಲ್ಯದ 5,950 ನಕಲಿ ಸಿಗರೇಟ್ ಪ್ಯಾಕ್ ಗಳ ವಶ,
ಮಲ್ಲೇಶ್ವರಂ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಐಪಿಆರ್ ಸರ್ವಿಸಸ್ ಕಂಪನಿಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಪಿರ್ಯಾದುದಾರರು ದಿನಾಂಕ:10/10/2025 ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ಐ.ಟಿ.ಸಿ. ಕಂಪನಿಗೆ ಸಂಬಂದಪಟ್ಟಂತೆ, ನಕಲಿ ಐಟಿಸಿ ಸಿಗರೇಟ್ಗಳ ತಯಾರಿಕೆ. ವಿತರಣೆ ಮತ್ತು ಮಾರಾಟದಲ್ಲಿ ಕೆಲವು ವ್ಯಕ್ತಿಗಳು ಮತ್ತು ಕೆಲವು ಸಂಸ್ಥೆಗಳು ತೊಡಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು,
ಬಾತ್ಮೀಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:11/10/2025 ರಂದು ಬೆಂಗಳೂರು ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಬಳಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳಿಬ್ಬರನ್ನು ವಿಚಾರಣೆಗೊಳಪಡಿಸಲಾಗಿ, ಹೊರ ರಾಜ್ಯ ಮತ್ತು ಹೊರ ದೇಶದಿಂದ ನಕಲಿ ಸಿಗರೇಟ್ಗಳನ್ನು ತರಿಸಿಕೊಂಡು, ಪ್ರತಿಷ್ಠಿತ ಐಟಿಸಿ ಕಂಪನಿಯ ಹೆಸರಿನಲ್ಲಿ ಅಸಲಿ ಸಿಗರೇಟ್ಗಳೆಂದು ನಂಬಿಸಿ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ಆರೋಪಿತರುಗಳ ವಶದಲ್ಲಿದ್ದ ನಕಲಿ ಗೋಲ್ಡ್ ಪ್ಯಾಕ್ ಕಿಂಗ್ಸ್ 205 ಬಂಡಲ್ಗಳಲ್ಲಿ ಒಟ್ಟು 4,100 ಸಿಗರೇಟ್
ಪ್ಯಾಕ್ಗಳು ಹಾಗೂ ನಕಲಿ Marlboro gold advance ನ ಒಟ್ಟು 185 ಬಂಡಲ್ಗಳು ಪ್ರತಿ ಬಂಡಲ್ನಲ್ಲಿ 10 ಸಣ್ಣ ಸಣ್ಣ ಪ್ಯಾಕ್ಗಳಿರುತ್ತವೆ. ಒಟ್ಟು 1850 ಪ್ಯಾಕ್ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಇವುಗಳು ಅಂದಾಜು ಮೌಲ್ಯ 14,00,000/- ರೂಗಳಾಗಿರುತ್ತದೆ.
ದಿನಾಂಕ: 11/10/2025 ರಂದು ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬಿ.ಎಸ್. ನೇಮಗೌಡ, ಐ.ಪಿ.ಎಸ್. ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ, ಕೃಷ್ಣಮೂರ್ತಿ ಹೆಚ್. ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ನೇತೃತ್ವದಲ್ಲಿ ಬಿ.ಆರ್. ಜಗದೀಶ್, ಪೊಲೀಸ್ ಇನ್ಸ್ಪೆಕ್ಟರ್, ಮಲ್ಲೇಶ್ವರಂ ಪೊಲೀಸ್ ಠಾಣೆ ರವರು ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು