ಶೇಷಾದ್ರಿಪುರಂ ಪೊಲೀಸರ ಕಾರ್ಯಾಚರಣೆ : ವಿದೇಶಿ ವಿದ್ಯಾರ್ಥಿಯಿಂದ ದ್ವಿ-ಚಕ್ರ ವಾಹನ ಮತ್ತು ಮೊಬೈಲ್‌ನ್ನು ಸುಲಿಗೆ ಮಾಡಿದ್ದ ಮೂವರು ವ್ಯಕ್ತಿಗಳ ಬಂಧನ

ದಿನಾಂಕ:08/10/2025 ರಂದು ಮಧ್ಯರಾತ್ರಿ 12-40 ಗಂಟೆಯ ಸಮಯದಲ್ಲಿ ವಿದೇಶಿ ವಿದ್ಯಾರ್ಥಿಯೊಬ್ಬನು ತನ್ನ ದ್ವಿ-ಚಕ್ರ ವಾಹನದಲ್ಲಿ ಕೋರಮಂಗಲದಿಂದ ಹೊರಟು ಬರುತ್ತಿರುವಾಗ್ಗೆ, ಮಾರ್ಗ ಮಧ್ಯೆ ಒನ್ ವೇ ನಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಮೂವರು ಅಪರಿಚಿತ ವ್ಯಕ್ತಿಗಳನ್ನು ನೋಡಿ ವಿದೇಶಿ ವಿದ್ಯಾರ್ಥಿಯು ಬೈಕ್‌ನಲ್ಲಿ ಬರುತ್ತಿದ್ದವರನ್ನು ಚಮಕಾಯಿಸಿದಾಗ, ಆ ಮೂವರು ಅಪರಿಚಿತ ವ್ಯಕ್ತಿಗಳು ತಮ್ಮ ದ್ವಿ-ಚಕ್ರ ವಾಹನದಲ್ಲಿ ವಿದೇಶಿ ವಿದ್ಯಾರ್ಥಿಯನ್ನು ಹಿಂಬಾಲಿಸಿಕೊಂಡು ಬಂದಿದ್ದು, ಇದನ್ನು ಗಮನಿಸಿದ ವಿದೇಶಿ ವಿದ್ಯಾರ್ಥಿಯು ಮಧ್ಯರಾತ್ರಿ 01-00 ಗಂಟೆ ಸುಮಾರಿಗೆ ಶೇಷಾದ್ರಿಪುರಂನ ರಾಜೀವ್ ಗಾಂಧಿ ಸರ್ಕಲ್ ಗೆ ಬಂದಾಗ, ಆತನು ಭಯದಿಂದ ನಡುಕ ಬಂದು ಬೈಕ್‌ನಿಂದ ಕೆಳಗೆ ಬಿದ್ದಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು, ವಿದೇಶಿ ವಿದ್ಯಾರ್ಥಿಯನ್ನು ಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿ, ಆತನಿಂದ ಒಂದು ಮೊಬೈಲ್ ಫೋನ್, ಬೈಕ್ ಕೀನ್ನು ಕಿತ್ತುಕೊಂಡು ಬೇರೆ ಏನೇನಿದೆ ಎಂದು ಏರು ಧ್ವನಿಯಲ್ಲಿ ಕೇಳಿದ್ದು, ಆಗ ವಿದೇಶಿ ವಿದ್ಯಾರ್ಥಿಯು ತನ್ನ ಬಳಿ ಏನು ಇಲ್ಲವೆಂದು ತಿಳಿಸಿರುತ್ತಾನೆ. ಆಗ ವಿದೇಶಿ ವಿದ್ಯಾರ್ಥಿಯ ಮೊಬೈಲ್ ಫೋನ್‌ನಿಂದ ₹11,000/-ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ.

ನಂತರ ಆ ಮೂವರು ಅಪರಿಚಿತ ವ್ಯಕ್ತಿಗಳು, ವಿದೇಶಿ ವಿದ್ಯಾರ್ಥಿಯ ದ್ವಿ-ಚಕ್ರ ವಾಹನವನ್ನು ತೆಗೆದುಕೊಂಡು ಆತನನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಹೊರಟು ಹೋಗಿರುತ್ತಾರೆ. ವಿದೇಶಿ ವಿದ್ಯಾರ್ಥಿಯು ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಪೊಲೀಸರಿಗೆ ಫೋನ್ ಮಾಡಿಸಿದ ನಂತರ, ಸ್ಥಳಕ್ಕೆ ಪೊಲೀಸರು ಆಗಮಿಸಿ, ವಿದೇಶಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿರುತ್ತಾರೆ. ನಂತರ ವಿದೇಶಿ ವಿದ್ಯಾರ್ಥಿಯಿಂದ ನಡೆದ ಘಟನೆಯ ಬಗ್ಗೆ ಪಿರ್ಯಾದನ್ನು ಪಡೆದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.

ತನಿಖೆಯನ್ನು ಮುಂದುವರೆಸಿ, ಕೃತ್ಯ ಎಸಗಿದ್ದ ಮೂವರು ಆರೋಪಿಗಳನ್ನು ದಿನಾಂಕ:14/10/2025 ರಂದು ವಶಕ್ಕೆ ಪಡೆದು ಅವರುಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ-ಚಕ್ರ ವಾಹನ ಮತ್ತು ಪಿರ್ಯಾದುದಾರರಿಂದ ಕಿತ್ತುಕೊಂಡು ಹೋಗಿದ್ದ ಒಂದು ದ್ವಿ-ಚಕ್ರ ವಾಹನವನ್ನು (ಒಟ್ಟು 02 ದ್ವಿ-ಚಕ್ರ ವಾಹನಗಳು), ಆರೋಪಿಗಳಿಗೆ ಮತ್ತು ಪಿರ್ಯಾದುದಾರರಿಗೆ ಸಂಬಂಧಿಸಿದ ಒಟ್ಟು 4 ಮೊಬೈಲ್‌ಗಳು ಹಾಗೂ 2 11,000/-ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಮೂವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ ಯಶಸ್ವಿ ಕಾರ್ಯಚರಣೆಯನ್ನು ಅಕ್ಷಯ್ ಎಂ. ಹಾಕಿ ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ ಮತ್ತು ಆರ್. ಪ್ರಕಾಶ್, ಸಹಾಯಕ ಪೊಲೀಸ್ ಆಯುಕ್ತರು, ಶೇಷಾದ್ರಿಪುರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಶೇಷಾದ್ರಿಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ : ಮುಬಾರಕ್ ಬೆಂಗಳೂರು

error: Content is protected !!