ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ಯೋಧನೊಬ್ಬ ದಲಿತ ವ್ಯಕ್ತಿಯೊಬ್ಬನನ್ನು ಸೋಮವಾರ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಮ್ರಿ ಬೇಗಮ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನೆಲೆಸಿರುವ ನಿವೃತ್ತ ಯೋಧ ಅರುಣ್ ಸಿಂಗ್ ಅವರು ಪರಿಶಿಷ್ಟ ಜಾತಿ ಸಮುದಾಯದ ರಮೇಶ್ ಭಾರತಿ (46) ಅವರೊಂದಿಗೆ ಭೂಮಿ ವಿವಾದದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿನೀತ್ ಜೈಸ್ವಾಲ್ ಹೇಳಿದ್ದಾರೆ.
ಸೋಮವಾರ ಸಂಜೆ, ಅರುಣ್ ಸಿಂಗ್ ಅವರು ತರಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ರಿ ದುಬೆ ಗ್ರಾಮದ ಬಳಿ ರಮೇಶ್ ಅವರನ್ನು ಅಡ್ಡಗಟ್ಟಿ ಗುಂಡು ಹಾರಿಸಿದರು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಜೈಸ್ವಾಲ್ ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ವಶಪಡಿಸಿಕೊಂಡು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಸ್‌ಪಿ ಹೇಳಿದರು.
ಮೃತರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವರದಿ ಸದಾನಂದ ಹೆಚ್