ಬೈಕಿನಲ್ಲಿ ಮದ್ಯಪಾನ ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ರೌಡಿಶೀಟರ್ ಮತ್ತು ಆತನ ಸಹಚರನ ಬಂಧನ.
ದಿನಾಂಕ.15/05/2026 ರಂದು ರಾತ್ರಿ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸೀಗೆಹಳ್ಳಿ ಗೇಟ್ ಬಳಿ ಇಬ್ಬರು ವ್ಯಕ್ತಿಗಳು ತಾವರೆಕೆರೆ ಕಡೆಯಿಂದ ಬೆಂಗಳೂರು ಕಡೆಗೆ ದ್ವಿ-ಚಕ್ರ ವಾಹನದಲ್ಲಿ ಬರುತ್ತಿದ್ದು, ಅದರಲ್ಲಿ ಹಿಂಬದಿಯ ಸವಾರನು ಕೈಯಲ್ಲಿ ಮದ್ಯದ ಬಾಟಲ್ ಅನ್ನು ಹಿಡಿದುಕೊಂಡು ದ್ವಿ-ಚಕ್ರ ವಾಹನ ಚಲಿಸುತ್ತಿದ್ದಾಗಲೇ ಮದ್ಯಪಾನ ಮಾಡುತ್ತಾ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಚೀರಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗಸ್ತಿನಲ್ಲಿದ್ದ ಬೆಂಗಳೂರು ನಗರ ಸಿಸಿಬಿ, ಸಂಘಟಿತ ಅಪರಾಧ ದಳ (ಪಶ್ಚಿಮ) ವಿಭಾಗದ ಪೊಲೀಸರು ದ್ವಿ-ಚಕ್ರ ವಾಹನ ಸಮೇತ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ವಶಕ್ಕೆ ಪಡೆದ ವ್ಯಕ್ತಿಗಳಿಬ್ಬರನ್ನು ವಿಚಾರಮಾಡಲಾಗಿ, ಓರ್ವ ವ್ಯಕ್ತಿಯು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು ಈತನ ಮೇಲೆ ಸುಮಾರು 13 ಕೇಸುಗಳು ಇರುವುದು ತಿಳಿದುಬಂದಿದ್ದು, ಅದರಲ್ಲಿ ಕೆಲವು ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದು, ಈತನ ವಿರುದ್ಧ ವಾರೆಂಟ್ಗಳನ್ನು ಹೊರಡಿಸಲಾಗಿರುತ್ತದೆ. ಮತ್ತೋರ್ವ ವ್ಯಕ್ತಿಯ ಮೇಲೂ ಸಹ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿರುತ್ತದೆ. ಇವರುಗಳ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರೆದಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ, ಸಂಘಟಿತ ಅಪರಾಧ ದಳ ಪಶ್ಚಿಮ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಕೈಗೊಂಡಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
ವರದಿ : ಮುಬಾರಕ್ ಎಸ್
