ಚಿಂತನ-ಮಂಥನ ಕೃಷಿಯಲ್ಲಿ ಸಾವಯವದ ಮಹತ್ವ:-

ಭಾರತೀಯ ಕೃಷಿಯನ್ನು ಒಮ್ಮೆ ಹಿಂತಿರುಗಿ ನೋಡುವುದಾದರೆ ನಮ್ಮ ಪೂರ್ವಜರು ಸಾವಯವ ಕೃಷಿಯನ್ನೇ ಮಾಡುತ್ತಿದ್ದರು .ಸಾವಯವ ಕೃಷಿ ಪದ್ದತಿ ಎಂದರೆ ನೈಸರ್ಗಿಕವಾಗಿ ಅಥವಾ ಜೈವಿಕವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಸಮೃದ್ಧವಾದ ಮತ್ತು ಆರೋಗ್ಯಕರ ಬೆಳೆಯನ್ನು ಬೆಳೆಯುವ ಪದ್ದತಿಯಾಗಿದೆ.
ನಮ್ಮ ಪೂರ್ವಜರು ನಿಸರ್ಗದೊಂದಿಗೆ ಬದುಕಿದವರು.
ಯಾವುದೇ ರಾಸಾಯನಿಕ ಬಳಸದೆ ಸಾಂಪ್ರದಾಯಿಕವಾಗಿ ಬೆಳೆಗಳನ್ನು ಬೆಳೆಯುತ್ತಿದ್ದರು.
ಸಾವಯವ ಕೃಷಿ ಮಾಡುವುದರಿಂದ ಮುಂದಿನ ಪೀಳಿಗೆಗೆ ಭೂಮಿಯನ್ನು ರಾಸಾಯನಿಕ ಮುಕ್ತ ಮತ್ತು ಆರೋಗ್ಯಕರ ಮಣ್ಣನ್ನು ನಾವು ಉಳಿಸಿ ಹೋಗಬಹುದು.
ಇತ್ತೀಚಿನ ಕೃಷಿಗೂ ಪ್ರಾಚೀನ ಕೃಷಿ ಪದ್ದತಿಗೂ ಬಹಳ ವ್ಯತ್ಯಾಸವನ್ನು ಕಾಣಬಹುದು.ಕ್ರಮೇಣ ಸಾವಯವದ ಕಡೆಗೆ ಒಲವು ಕಮ್ಮಿಯಾಗಿ ಹಸಿರು ಕ್ರಾಂತಿಯ ಹೆಸರಿನಲ್ಲಿ ರಾಸಾಯನಿಕಗಳನ್ನು ಬಳಸಲು ಶುರುವಾಗಿ ತಾಂತ್ರಿಕತೆಗೆ ಕೃಷಿಯನ್ನು ಒಳಪಡಿಸಿಕೊಂಡು ಎಲ್ಲವನ್ನೂ ಸರಳೀಕರಣ ಗೊಳಿಸಿ ಮತ್ತು ನಿರಾಯಾಸವಾಗಿ ಬೆಳೆಯುವ ಪದ್ದತಿಯನ್ನು ಅಳವಡಿಕೊಳ್ಳಲಾಯಿತು.ಇದು ಅಭ್ಯುದಯವೋ ಅಥವಾ ಅವನತಿಯ ಕಡೆಯೋ ಗೊತ್ತಾಗದಂತ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದೊದಗಿದೆ ಎಂದು ಹೇಳಬಹುದು.
ಇಂದು ರಾಸಾಯನಿಕ ಕೃಷಿ ಪದ್ದತಿ ಅತ್ಯಂತ ಸುಲಭ ಮತ್ತು ಬಹುಬೇಗ ಫಲಿತಾಂಶ ನೀಡುವುದು ಎಂಬ ಕಾರಣಕ್ಕೆ ಎಲ್ಲರೂ ಅದನ್ನೇ ಅವಲಂಬಿಸಿದ್ದೇವೆ ಮತ್ತು ಅನಿವಾರ್ಯತೆಗೂ ಒಳಗಾಗಿದ್ದೇವೆ.
ಆದರೆ ಅದರ ದುಷ್ಪರಿಣಾಮ ಮಾತ್ರ ನೇರವಾಗಿ ಭೂಮಿಗೆ ಮತ್ತು ನಮ್ಮೆಲ್ಲರ ಮೇಲೆಯೇ ಆಗುತ್ತಿದೆ. ಈ ಕೆಡುತ್ತಿರುವ ಪರಿಸರದ ಬಗ್ಗೆ ಕಳವಳ ಮಾತ್ರ ಯಾರಿಗೂ ಬರದಷ್ಟು ಕಟುಕರಾಗಿದ್ದೇವೆ.
ಭಾರತಕ್ಕೆ ಬರ ಎದುರಾದಾಗ ಸ್ವಾವಲಂಬಿಯಾಗಿ ಆಹಾರ ಉತ್ಪಾದಿಸುವ ಉದ್ದೇಶದಿಂದ ಹಿಂದೆ ಹಸಿರುಕ್ರಾಂತಿ ಎಂಬ ಹೆಸರಿನಲ್ಲಿ ವಿದೇಶದಿಂದ ರಸಗೊಬ್ಬರ ಮತ್ತು ರಾಸಾಯನಿಕ ಕೀಟನಾಶಕಗಳನ್ನು ತಂದು ಭಾರತದ ಭೂಮಿಗೆ ಸುರಿದು ದುಪ್ಪಟ್ಟು ಬೆಳೆಯನ್ನು ಬೆಳೆದು ದೇಶ ಸ್ವಾವಲಂಬಿಯಾಯಿತು.ಸಾವಯವದಲ್ಲಿ ನಮ್ಮ ರೈತರು ಖುಷಿಯಲ್ಲಿ ಕೃಷಿ ಮಾಡುತ್ತಿದ್ದರು.ರಾಸಾಯನಿಕ ಬಳಸಿ ಸಮೃದ್ಧ ಬೆಳೆ ತರಬಹುದು ಎಂಬ ಮ್ಯಾಜಿಕ್ ಅವರಿಗೆ ಆಶ್ಚರ್ಯ ಮತ್ತು ಆಕರ್ಷಣೆಗೆ ಒಳಗಾಗುವಂತೆ ಮಾಡಿತು. ಅದರ ರುಚಿಯನ್ನು ಇಲ್ಲಿನ ರೈತರಿಗೆ ಹಚ್ಚಲಾಯಿತು.
ಹೆಚ್ಚಿನ ಆಹಾರ ಧಾನ್ಯ ಉತ್ಪಾದಿಸುವ ಒಂದೇ ಕಾರಣದಿಂದ ಆಹಾರದ ಗುಣಮಟ್ಟವನ್ನೇ ಮರೆತು ಇಳುವರಿಗಾಗಿ ಬೆಳೆಯನ್ನು ಬೆಳೆಯಲು ರೈತರು ಶುರುಮಾಡಿದರು. ಇದೆಲ್ಲದರ ಪರಿಣಾಮ ಮಣ್ಣಿನ ಫಲವತ್ತತೆ ಕಮ್ಮಿಯಾಗಿ ಜೈವಿಕ ಕ್ರಿಯೆಗೆ ರಾಸಾಯನಿಕ ವಿಷವಾಗಿ ಪರಿಣಮಿಸಿತು.ಯಾವಾಗ ಜೈವಿಕ ಕ್ರಿಯೆ ಇಲ್ಲವೋ ಅವಾಗ ಜೀವಿಗಳು ಬದುಕೋದು ಕಷ್ಟವಾಗುತ್ತದೆ.ಜೀವಿಗಳು ಬದುಕದ ವಾತಾವರಣದಲ್ಲಿ ಮನುಷ್ಯನಾದರೂ ಹೇಗೆ ಬದುಕುವನು !
ಜೀವ ಸರಪಳಿಯೇ ಕಡಿದು ಹೋದ ಮೇಲೆ ನೈಸರ್ಗಿಕ ಕೃಷಿಯ ಅವನತಿಯೂ ಆಗತೊಡಗಿತು.
ಈಗ ಸಧ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಂದು ಬೆಳೆಗೆ ನಾವು ರಾಸಾಯನಿಕ ಗೊಬ್ಬರ ಮತ್ತು ಔಷಧಿಯ ಸಿಂಪರಣೆ ಇಲ್ಲದೆ ಬೆಳೆಯಲಾಗದ ಅನಿವಾರ್ಯತೆ ಬಂದೊದಗಿದೆ.
ಬೆಳೆಯುವ ಬೆಳೆಗೆ ಆದಾಯದ ಅರ್ಧದಷ್ಟು ಪಾಲು ನಾವು ರಾಸಾಯನಿಕಗಳ ಖರೀಧಿ ಮಾಡೋದರಲ್ಲೇ ವೆಚ್ಚ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಬಹುದು.ನಮ್ಮೂರ ಕಡೆ ಒಂದು ಮಾತಿದೆ “ಕಸ ತಿನ್ನೋದಕಿಂತ ತುಸು ತಿನಬೇಕಂತೆ” ಹಾಗೆ ನಾವು ಕ್ವಾಂಟಿಟಿ ಕಡೆಗೆ ನೋಡಿ ಬೆಳೆಯುತ್ತಿದ್ದೇವೆ ಕ್ವಾಲಿಟಿ ಕಡೆ ನೋಡ್ತಿಲ್ಲ.
ಸಾವಯವ ಕೃಷಿಯ ಮೂಲವಾದ ದನ ಕರುಗಳು ಕೃಷಿಯಲ್ಲಿ ಉಳುಮೆ ಮಾಡುವುದರಿಂದ ಹಿಡಿದು ಸಾವಯವ ಗೊಬ್ಬರ ಉತ್ಪಾದನೆ,ಕಳೆಯನ್ನು ಮೇವಾಗಿ ಬಳಸಿಕೊಂಡು ಹಾಲು ನೀಡುವ ಪ್ರಾಣಿಗಳ ಜೊತೆಗಿನ ನಂಟು ಕ್ರಮೇಣ ಕಡಿಮೆಯಾಗುತ್ತಿದೆ.ಯಾವಾಗ ಯಾಂತ್ರಿಕರಣಕ್ಕೆ ಕೃಷಿ ಒಳಪಟ್ಟಿತೋ ಆಗ ಕೃಷಿಯಲ್ಲಿ ದನ ಕರುಗಳ ಎತ್ತುಗಳ ಅನಿವಾರ್ಯತೆ ಕಮ್ಮಿಯಾಗತೊಡಗಿತು.ಒಂದು ಕಾಲವಿತ್ತು ಎತ್ತು ರೈತನ ಎದೆ ಇದ್ದಂತೆ ಅಂತ ಹೇಳುತ್ತಿದ್ದರು ನಮ್ಮ ಹಿರಿಯರು.ಆದರೆ ಈಗ ಟ್ರ್ಯಾಕ್ಟರ್ ಬಂದು ಎತ್ತುಗಳು ಕಸಾಯಿ ಖಾನೆಗೆ ಹೋಗುತ್ತಿವೆ.
ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡುವ ರೈತರು ಬೆರಳೆಣಿಕೆಯಷ್ಟು ಅನ್ನುವುದಕ್ಕಿಂತ ಲಕ್ಷಕ್ಕೊಬ್ಬರು ಉಳಿದಿರಬಹುದಷ್ಟೆ. ಆದರೆ ಜೀವ ಸಂಕುಲದ ಮೇಲೆ ರಾಸಾಯನಿಕದ ಪರಿಣಾಮ ಮಾತ್ರ ಕಣ್ಣಿಗೆ ಕಾಣಬಹುದು.ಅದರ ಯಥೇಚ್ಚ ಬಳಕೆಯಿಂದ ಪರಿಸರ ಮಾಲಿನ್ಯದಿಂದ ಹೊಸ ರೋಗಗಳು ಉತ್ಪತ್ತಿಯಾಗುತ್ತಿವೆ.ನಿಸರ್ಗದ ಮೇಲೆ ಪರಿಣಾಮ ಬೀರುವ ಮೂಲಕ ಮನುಷ್ಯ ತನ್ನ ಸ್ವಾರ್ಥದಿಂದ ಇಡೀ ಜೀವ ಸಂಕುಲದ ಜೊತೆಗೆ ತನ್ನ ಜೀವಕ್ಕೂ ಆಪತ್ತು ತಂದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ನನ್ನ ಪ್ರಕಾರ ಕೃಷಿಯಲ್ಲಿ ರಾಸಾಯನಿಕವೂ ಅನಿವಾರ್ಯವಲ್ಲ ಎಂದು ಹೇಳಲು ಇಚ್ಛಿಸುವೆ . ಈಗಲೂ ಸಾವಯವದಲ್ಲಿ ವೈಜ್ಞಾನಿಕತೆ ಬಳಸಿಕೊಂಡು ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಬಹುದು.
ಮಣ್ಣಿನ ಫಲವತ್ತತೆಯನ್ನು ಮರುಪೂರ್ಣ ಗೊಳಿಸುವ ಏಕೈಕ ಮಾರ್ಗ ಮಾತ್ರ ಸಾವಯವ ಕೃಷಿಯಲ್ಲಿದೆ ಎಂದು ಹೇಳಬಹುದು.
ಭೂಮಿಗೆ ಇರುವ ತಾಳ್ಮೆಯ ಶಕ್ತಿ ಹೆಣ್ಣಿಗಿದೆ ಎಂದು ನಮ್ಮ ಪೂರ್ವಜರು ಹೇಳಿದರು. ಹಾಗೆ ಭೂಮಿ ತಾಯಿಯು ನಾವು ಏನೇ ಮಾಡಿದರೂ ಅದೆಲ್ಲವನ್ನು ತನ್ನೊಡಲಿಗೆ ಹಾಕಿಕೊಂಡು ಕ್ಷಮಿಸಿ ನಮ್ಮನ್ನೆಲ್ಲ ಹೊತ್ತು ಸಲುಹುತ್ತಿದ್ದಾಳೆ.
ಇಂದಿಗೂ ನಾವು ಯಶಸ್ವಿಯಾಗಿ ಕೃಷಿ ಮಾಡಲು ಭೂಮಿ ಸಹಕರಿಸುತ್ತದೆ ಏಕೆಂದರೆ ಭೂಮಿ ತಾಯಿಯ ಚೊಚ್ಚಲ ಮಗ ರೈತ .ತನ್ನ ಮಗ ಏನೇ ಮಾಡಿದರೂ ತಾಯಿಗೆ ಬೇಕಲ್ಲವೇ. ನಾವು ರಾಸಾಯನಿಕ ಬಳಸದೆ ಒಮ್ಮೆಲೆ ಸಾವಯವ ಪದ್ದತಿಗೆ ಭೂಮಿಯನ್ನು ಬದಲಿಸಲು ಸಾಧ್ಯವಾಗದಿರಬಹುದು ಆದರೆ ಕ್ರಮೇಣ ಶ್ರಮವಹಿಸಿ ಸಾವಯವ ಕೃಷಿಗೆ ಆಧ್ಯತೆ ನೀಡುತ್ತ ಬಂದರೆ ವಿಷಮುಕ್ತ ಭೂಮಿಯನ್ನು ಮತ್ತೆ ಪಡೆಯಬಹುದು.ಏಕಂದರೆ ಭೂಮಿಯೂ ಕೂಡ ಸಾವಯವಕ್ಕಾಗಿ ಹಂಬಲಿಸುತಿದೆ.
ಅದಕಾಗಿ ನಾವು ಬಹಳ ಶ್ರಮವಹಿಸುವ ಅವಶ್ಯಕತೆ ಇಲ್ಲ ,ನಾವು ರಾಸಾಯನಿಕಗಳ ಬಳಕೆ ಕಡಿಮೆಗೊಳಿಸಿದರೆ ಸಾಕು ಭೂಮಿ ತನ್ನ ಶಕ್ತಿಯನ್ನು ತಾನಾಗಿಯೇ ಪಡೆದುಕೊಳ್ಳುತ್ತದೆ.
ಬಹಳ ಜನ ರೈತರು ಸಾವಯವ ಕೃಷಿ ಇಂದಿನ ಕಾಲಮಾನದಲ್ಲಿ ಮಾಡುವುದು ಕಷ್ಟವೆಂದು ತಿಳಿದಿದ್ದಾರೆ ಮತ್ತು ಅದಕ್ಕೆ ಬಹಳ ಶ್ರಮ ಬೇಕು ಅನ್ನುವಷ್ಟು ಸೋಮಾರಿಗಳಾಗಿದ್ದಾರೆ.ನನ್ನ ಅನುಭವದ ಪ್ರಕಾರ ರೈತರು ಜೈವಿಕ ಗೊಬ್ಬರ,ಮತ್ತು ಕೀಟನಾಶಕಗಳಿಗಿಂತ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ಖರ್ಚು ಮಾಡುತ್ತಾರೆ.
ಐದು ಸಾವಿರ ರೂಪಾಯಿ ಕೊಟ್ಟು ಒಂದು ಟ್ರಿಪ್ ತರುವ ಕೊಟ್ಟಿಗೆ ಗೊಬ್ಬರ ಇಪ್ಪತ್ತು ಸಾವಿರ ಕೊಟ್ಟು ತರುವ ರಾಸಾಯನಿಕ ಗೊಬ್ಬರಕ್ಕೆ ಅನವಶ್ಯಕ ಖರ್ಚು ಮಾಡುತ್ತೇವೆ.ರಸಗೊಬ್ಬರದ ಶಕ್ತಿಯು ಒಂದು ಬೆಳೆ ಬರುವ ವರೆಗೂ ಮಾತ್ರವಿರುತ್ತದೆ,ಆದರೆ ಜೈವಿಕ ಗೊಬ್ಬರ ಮಾತ್ರ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಅದರ ತೇವಾಂಶ ಕಾಪಾಡುವ ಮತ್ತು ಎರಡ್ಮೂರು ವರ್ಷದ ವರೆಗೆ ಬೆಳೆಗೆ ಶಕ್ತಿ ಪೂರೈಸುತ್ತದೆ.ಆ ಜೈವಿಕ ಗೊಬ್ಬರದಲ್ಲಿ ಬೆಳೆದ ಬೆಳೆ ಮಾತ್ರ ಆರೋಗ್ಯಕರ ಮತ್ತು ಶಕ್ತಿವರ್ಧಕವಾಗಿ ಇರುತ್ತದೆ.ಆ ಬೆಳೆಗೆ ಯಾವುದೇ ರೋಗ ತಡೆದುಕೊಳ್ಳುವ ರೋಗ ನಿರೋಧಕ ಶಕ್ತಿ ಇರುತ್ತದೆ .ಹಾಗೆಯೇ ಕೀಟಗಳ ,ರೋಗಗಳ ಹತೋಟಿಗೆ ಮಿಶ್ರ ಬೆಳೆಗಳು,ಮತ್ತು ಮೋಹಕ ಬಲೆಗಳ ಅಳವಡಿಕೆ ಹೀಗೆ ಅನೇಕ ಜೈವಿಕ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು.
ಉದಾಹರಣೆಗೆ-ತೊಗರಿ,ಕಡಲೆ ಬೆಳೆಗಳ ಮಧ್ಯೆ ಒಂದೊಂದು ಜೋಳದ ದಂಟನ್ನು ಬೆಳೆದರೆ ಆ ಜೋಳದ ಮೇಲೆ ಕುಳಿತ ಹಕ್ಕಿ ಅಲ್ಲಿರುವ ಬೆಳೆಯ ನಡುವಿನ‌ ಕೀಟವನ್ನು ಹೆಕ್ಕಿ ತಿಂದು ಬೆಳೆಗೆ ರಕ್ಷಕವಾಗುತ್ತದೆ.ಮತ್ತು ಜೋಳದ ದಂಟಿನ ಸಿಹಿ ಸವಿಯಲು ಬರುವ ಇರುವೆ ಕೂಡ ಕೀಟವನ್ನು ತಿನ್ನುವ ಮೂಲಕ ತಾವೂ ಬದುಕಿ ನಮ್ಮನ್ನೂ ಬದುಕಿಸುವ ಪರೋಪಕಾರಿ ಮತ್ತು ಜೀವ ಸರಪಳಿಯಾಗಿ ಬದುಕುತ್ತವೆ.ಹಕ್ಕಿಗಳ ಸಂತತಿ ಕಡಿಮೆಯಾಗಲು ರಾಸಾಯನಿಕ ಕೃಷಿಯೂ ಮುಖ್ಯ ಕಾರಣ ಎಂದು ಹೇಳಬಹುದು.
ರೈತನ ಕೊಟ್ಟಿಗೆಯಲ್ಲಿ ಇರುವ ಹಸು ಕರುಗಳ ಸಂಖ್ಯೆ ನೋಡಿ ಅವನ ಶ್ರೀಮಂತಿಕೆ ಅಳೆಯುವ ಕಾಲವೊಂದಿತ್ತು,ಆದರೆ ಈಗ ಯಂತ್ರೋಪಕರಣ ನೋಡಿ ಅವನ ಮನೆಯ ಎದುರಿನ ಕಾರು ನೋಡಿ ಅವನ ಸಿರಿವಂತಿಕೆ ಅಳೆಯುತ್ತಾರೆ.
ಇದಲ್ಲದೆ ಕೋಳಿ ,ಕುರಿ,ಜೇನು ಸಾಕಾಣಿಕೆ ಕೂಡ ಮಾಡುವುದು ಸಾವಯವ ಕೃಷಿಗೆ ಪೂರಕವಾಗಿ ಸಹಕಾರಿಯಾಗುತ್ತವೆ.ಒಟ್ಟಾರೆ ಹೇಳುವುದಾದರೆ ರೈತರು ಸಮಗ್ರ ಕೃಷಿ ಮಾಡುವುದು ಬಹಳ ಒಳ್ಳೆಯದು.ಹಂತ ಹಂತವಾಗಿ ತಮ್ಮ ಆರ್ಥಿಕತೆಯನ್ನು ಬಲಗೊಳಿಸಿಕೊಳ್ಳಬಹುದು.ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಎಲ್ಲವನ್ನೂ ಇಷ್ಟಪಟ್ಟು ಆಸಕ್ತಿಯಿಂದ ಮಾಡಿದರೆ ಸ್ವರ್ಗವನ್ನೇ ಸೃಷ್ಟಿಸಬಹುದು.
ರೈತರು ಈಗಲಾದರೂ ಸಾವಯವದಲ್ಲಿ ಆಸಕ್ತಿ ತೋರಬೇಕು .ತಮ್ಮ ಕೊಟ್ಟಿಗೆಗೆ ಒಂದೇ ಹಸು ತಂದು ಅದರ ಗೋಮೂತ್ರ ಮತ್ತು ಸೆಗಣಿ ಬಳಸಿಕೊಂಡು ಉತ್ಕೃಷ್ಟವಾದ ಜೈವಿಕ ಗೊಬ್ಬರ ತಯಾರಿಸಿಕೊಂಡು ತಮ್ಮ ಭೂಮಿಗೆ ಹಾಕಿ ಬೆಳೆ ಬೆಳೆಯಬೇಕು.ಆರ್ಥಿಕ ಅಭಿವೃದ್ದಿಗೆ ಪೂರಕವಾಗಿರುವ ಸಾವಯವ ಪದ್ದತಿಯನ್ನು ಮತ್ತೆ ಶುರು ಮಾಡಬೇಕು.ತನ್ನ ಮಿತ್ರ ಎರೆಹುಳುವಿನ ಸ್ನೇಹ ಮತ್ತೆ ಮಾಡುವಂತಾಗಬೇಕು.ಹಾಗೆಯೇ ಮೇಲು ಗೊಬ್ಬರದ ಬಳಕೆಗಿಂತ ಬೆಳೆಯ ಕಟಾವಿನ ನಂತರ ಉಳಿಯುವ ಕೃಷಿ ತ್ಯಾಜ್ಯವನ್ನು ಮಣ್ಣಿಗೆ ಸೇರಿಸುವುದು ಬಹಳ ಪರಿಣಾಮಕಾರಿ ಮತ್ತು ಗೊಬ್ಬರವಾಗಿ ಮಣ್ಣು ಮೆದುವಾಗಿ ಫಲವತ್ತಾಗಲು ಕಾರಣವಾಗುತ್ತೆ.
ಉದಾ-ಕಬ್ಬಿನ ತ್ಯಾಜ್ಯ ಸುಡುವುದರಿಂದ ಮಣ್ಣಲ್ಲಿನ ಸೂಕ್ಷ್ಮಾಣು ಜೀವಿಗಳು ಸತ್ತು ಬೆಳೆಗೆ ಬೇಕಿರುವ ಜೀವಸತ್ವಗಳು ನಾಶವಾಗುತ್ತವೆ.ಆದರೆ ಆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನೆಲದಲ್ಲೇ ಕೊಳೆಯುವಂತೆ ಮಾಡಿ ಗೊಬ್ಬರವಾಗಿಸಬೇಕು.ಹೀಗೆ ಮಾಡುವುದರಿಂದ ಅಲ್ಲಿ ಜೈವಿಕ ಕ್ರಿಯೆ ನಡೆಯುತ್ತೆ ಮತ್ತು ಬೆಳೆಗೆ ಪೋಷಕಾಂಶಗಳು ಹೇರಳವಾಗಿ ಸಿಗುವ ಮೂಲಕ ಇಳುವರಿಯೂ ದುಪ್ಪಟ್ಟಾಗುತ್ತೆ.ಇದಲ್ಲದೆ ರೈತರು ದ್ವಿದಳ ಧಾನ್ಯಗಳಾದ ಅಲಸಂದೆ,ಹೆಸರು,ಸೆಣಬು ,ಕುದುರೆ ಮೆಂತೆ ಇಂತಹ ಬೆಳೆಯನ್ನು ಬಿತ್ತನೆ ಮಾಡಿ ಅದು ಬಲಿತು ಹೂವು ಬಿಡುವ ಕಾಲದಲ್ಲಿ ಅದನ್ನು ಪುಡಿ ಮಾಡಿ ಮಣ್ಣಿಗೆ ಸೇರಿಸಿದರೆ ಹಸಿರೆಲೆಯ ಗೊಬ್ಬರವಾಗಿ ಮಾರ್ಪಾಡಾಗುತ್ತದೆ ಇದೂ ಕೂಡ ಉತ್ತಮ ಗೊಬ್ಬರವಾಗಿ ಬೆಳೆಗೆ ಪೋಷಕಾಂಶಗಳನ್ನು ಕೊಡುತ್ತದೆ.
ಜೀವಾಮೃತ,ಗೋ ಕೃಪಾಮೃತ, ಇಂತಹ ಅನೇಕ ಸಾವಯವ ಗೊಬ್ಬರದ ಮೂಲಗಳನ್ನು ಮತ್ತೆ ಶುರು ಮಾಡಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕು .ಅನಿವಾರ್ಯ ಸಮಯದಲ್ಲಿ ರಾಸಾಯನಿಕದ ಬಳಕೆ ಮಾಡಿದರೂ ಪರವಾಗಿಲ್ಲ.ಹೆಚ್ಚೆಚ್ಚು ಜೈವಿಕ ವಿಧಾನ ಬಳಸೋಣ ಕ್ರಮೇಣ ಭೂಮಿ ಮತ್ತೆ ಆರೋಗ್ಯಯುತವಾಗಿ ಬದಲಾಗುತ್ತೆ. ಮುಂದಿನ ಪೀಳಿಗೆಗೆ ನಾವು ಕೊಡುಗೆಯಾಗಿ ಉಳಿಸುವ ಏಕೈಕ ಆಸ್ತಿ ಎಂದರೆ ಬಂಗಾರದಂತಹ ಈ ಆರೋಗ್ಯಕರ ಭೂಮಿ ಅಥವಾ ಈ ಮಣ್ಣು ಮಾತ್ರ ಎಂದು ಹೇಳಬಹುದು.
ರಾಸಾಯನಿಕದಿಂದ ಸಾವು ಬರುತ್ತೆ ಆದರೆ ಸಾವಯವಕ್ಕೆ ಎಂದಿಗೂ ಸಾವಿಲ್ಲ.
ಸಾವಯವ ಬಳಸೋಣ ಭೂಮಿಯನ್ನು ಉಳಿಸೋಣ.

ಲೇಖನ -ಸತೀಶ್ ಹಿರೇಮಠ

error: Content is protected !!