ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಮಾರ್ಚ್ 23, 2026 ರಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯು ದೇಶಾದ್ಯಂತ ಗೊಂದಲ ಸೃಷ್ಟಿಸಿದ್ದು, ಕೃತಕ ಇಂಧನ ಅಭಾವಕ್ಕೆ ಕಾರಣವಾಗಿದೆ ಎಂದು ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮುಜಾಹಿದ್ ಮರ್ಚೆಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ಇಂಧನ ಸಂಕಷ್ಟದ ಬಗ್ಗೆ ಮಾತನಾಡುತ್ತಾ ಕೋವಿಡ್ ಕಾಲದ ಲಾಕ್‌ಡೌನ್ ಒಗ್ಗಟ್ಟನ್ನು ಸ್ಮರಿಸಿದ್ದು, ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಿದೆ. ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪೆಟ್ರೋಲ್ ಬಂಕ್‌ಗಳ ಮುಂದೆ ಜನರು ದೀರ್ಘ ಸಾಲುಗಳಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿದ್ದು, ಸಾಮಾನ್ಯ ಜನರು ಹಾಗೂ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲಿಯಂ ಸಚಿವಾಲಯವು ದಾಸ್ತಾನು ಸಾಕಷ್ಟಿದೆ ಎಂದು ಸ್ಪಷ್ಟಪಡಿಸಿದ್ದರೂ ಜನರ ಆತಂಕ ಕಡಿಮೆಯಾಗಿಲ್ಲ. ಮಾರ್ಚ್ 13 ರಂದು ಪಂಜಾಬ್‌ನಲ್ಲಿ ಗ್ಯಾಸ್ ಸಾಲಿನಲ್ಲಿ ನಿಂತು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯನ್ನು ಸ್ಮರಿಸಿದ ಮರ್ಚೆಡ್, ಸರ್ಕಾರ ತಕ್ಷಣವೇ ಸ್ಪಷ್ಟನೆ ನೀಡಿ ಜನರ ಭೀತಿ ಹೋಗಲಾಡಿಸಬೇಕು ಮತ್ತು ಇಂಧನ ಕಾಳಸಂತೆ ತಡೆಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
