ಎಸ್‌ಡಿಪಿಐ ಬಾಗಲಕೋಟೆ ಜಿಲ್ಲಾ ಮಧ್ಯಂತರ ಪ್ರತಿನಿಧಿ ಸಭೆ ಮುಧೋಳದಲ್ಲಿ ಯಶಸ್ವಿ

ಮುಧೋಳ, ಜೂನ್ 17: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬಾಗಲಕೋಟೆ ಜಿಲ್ಲಾ ಘಟಕದ ಜಿಲ್ಲಾ ಮಧ್ಯಂತರ ಪ್ರತಿನಿಧಿ ಸಭೆಯು ಮುಧೋಳ ನಗರದ ಅಂಜುಮನ್ ಶಾದಿ ಮಹಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಭಾಗವಹಿಸಿ ಜಿಲ್ಲೆಯ ಜನಸಾಮಾನ್ಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು, ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ, ರೈತರು, ನೇಕಾರರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಹಕ್ಕುಗಳ ರಕ್ಷಣೆಗಾಗಿ ಐದು ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅಂಗೀಕೃತ ಪ್ರಮುಖ ನಿರ್ಣಯಗಳು:
1. ಕೃಷ್ಣಾ ಮೇಲ್ದಂಡೆ ಯೋಜನೆ (UKP-III) ಶೀಘ್ರ ಅನುಷ್ಠಾನ ಮತ್ತು ಮುಳುಗಡೆ ಸಂತ್ರಸ್ತರ ಪುನರ್ವಸತಿ
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಮುಳುಗಡೆಯಾಗಲಿರುವ ಗ್ರಾಮಗಳ ಸಂತ್ರಸ್ತರಿಗೆ ಭೂಮಿಗೆ ಪ್ರತಿಯಾಗಿ ಭೂಮಿ, ವೈಜ್ಞಾನಿಕ ಪರಿಹಾರ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
2. ನೇಕಾರರ ಆರ್ಥಿಕ ಸಬಲೀಕರಣ ಮತ್ತು ಮೆಗಾ ಜವಳಿ ಪಾರ್ಕ್ ಸ್ಥಾಪನೆ
ಇಳಕಲ್, ರಬಕವಿ-ಬನಹಟ್ಟಿ ಹಾಗೂ ಗುಳೇದಗುಡ್ಡ ಭಾಗದ ನೇಕಾರರ ಹಿತದೃಷ್ಟಿಯಿಂದ ಮೆಗಾ ಜವಳಿ ಪಾರ್ಕ್ ಸ್ಥಾಪನೆ, ಶೂನ್ಯ ಬಡ್ಡಿದರ ಸಾಲ, ವಿದ್ಯುತ್ ಸಬ್ಸಿಡಿ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್ ಜಾರಿಗೊಳಿಸುವಂತೆ ಆಗ್ರಹಿಸಲಾಯಿತು.
3. ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಮೇಲ್ದರ್ಜೆಗೆ
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸುವುದು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಯಿತು.
4. ವಿದ್ಯಾರ್ಥಿ ವಸತಿ ನಿಲಯ ಮತ್ತು ವಿದ್ಯಾರ್ಥಿವೇತನ ಸಮಸ್ಯೆ ಪರಿಹಾರ
ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ/ಪಂಗಡಗಳ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹೊಸ ವಸತಿ ನಿಲಯಗಳನ್ನು ಮಂಜೂರು ಮಾಡುವುದು, ವಿದ್ಯಾರ್ಥಿವೇತನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುವುದು ಹಾಗೂ ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
5. ಕೋಮು ಸೌಹಾರ್ದತೆ ರಕ್ಷಣೆ ಮತ್ತು ನಕಲಿ ಪ್ರಕರಣಗಳ ವಿರುದ್ಧ ಕ್ರಮ
ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ದ್ವೇಷ ರಾಜಕಾರಣ, ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಮಾಯಕರ ಮೇಲಿನ ಸುಳ್ಳು ಪ್ರಕರಣಗಳನ್ನು ಕೈಬಿಡಬೇಕು ಎಂದು ಸಭೆ ಒತ್ತಾಯಿಸಿತು.
ಸಭೆಯಲ್ಲಿ ಜಿಲ್ಲಾ ಮುಖಂಡರಾದ ಮುಬಾರಕ್ ಅಲ್ಲಾಖಾನ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ)(Admin), ಸದ್ದಾಂ ಕೋರ್ಬು (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಹುಸೇನ್ ಜಮಾದಾರ್ (ಜಿಲ್ಲಾ ಸದಸ್ಯರು), ಉಮರ್ ಫಾರೂಕ್ ಕಾಲೇಖಾನ್ (ಜಿಲ್ಲಾ ಕಾರ್ಯದರ್ಶಿ) ಹಾಗೂ ಶಮಿದ್ ರೇಷ್ಮೆ (ಜಿಲ್ಲಾ ಸದಸ್ಯರು) ಅವರು ನಿರ್ಣಯಗಳನ್ನು ಮಂಡಿಸಿದರು.
ಸಭೆಯು ಜಿಲ್ಲೆಯ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿ, ಜನಪರ ಹೋರಾಟಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿತು.

ವರದಿ : ಅಕ್ರಮ್ ಜಮಾದಾರ್

error: Content is protected !!