ತಾಲ್ಲೂಕಿನ ನಗರಗೆರೆ ಗ್ರಾಮದ ಸರ್ಕಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶಾಲೆಯ ಕೊಠಡಿಗಳಲ್ಲಿ ಕಸ ಗುಡಿಸುತ್ತಿದ್ದ ಪ್ರಕರಣ ನೆನಪು ಮಾಸುವ ಮುನ್ನವೇ ಪುನಃ ಅದೇ ಶಾಲೆಯಲ್ಲಿ ಮಕ್ಕಳನ್ನು ನೀರಿನ ಸಂಪಿನೊಳಗೆ ಇಳಿಸಿದ ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ನಗರಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ, ಗ್ರೂಪ್ ನೌಕರರು ನಿರ್ವಹಿಸಬೇಕಾದ ಕೆಲಸಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕೆಲಸಗಳನ್ನು ಮಾಡಿಸುತ್ತಿರುವ ವಿಚಾರಕ್ಕೆ , ಪಾಲಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಆವರಣದಲ್ಲಿರುವ ನೀರಿನ ಸಂಪ್ (ಸಂಗ್ರಹ ಟ್ಯಾಂಕ್) ಒಳಗೆ ವಿದ್ಯಾರ್ಥಿಗಳನ್ನು ಇಳಿಸಿ ನೀರನ್ನು ಮೇಲಕ್ಕೆ ತೆಗೆಯುವ ಕೆಲಸ ಮಾಡಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಹೆಸರೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬ, ಶಿಕ್ಷಕಿ ಹೇಳಿದ್ದರಿಂದ ನಾನು ನೀರಿನ ಸಂಪ್ ಒಳಗೆ ಇಳಿದು ನೀರನ್ನು ಮೇಲಕ್ಕೆ ತೆಗೆಯುತ್ತಿದ್ದೇನೆ, ಎಂದು ತಿಳಿಸಿದ್ದಾನೆ.
ಶಾಲೆಯ ಕುಡಿಯುವ ನೀರಿನ ತೊಟ್ಟಿಗಳನ್ನು ನಿಯಮಿತವಾಗಿ ಪಂಚಾಯತ್ ಸಿಬ್ಬಂದಿ ಅಥವಾ ಬಾಹ್ಯ ಕಾರ್ಮಿಕರಿಂದ ಮಾತ್ರ ಸ್ವಚ್ಛಗೊಳಿಸಬೇಕು. ನೀರಿನ ತೊಟ್ಟಿಗಳಿಗೆ ಕಡ್ಡಾಯವಾಗಿ ಬೀಗ ಹಾಕಿರಬೇಕು ಮತ್ತು ಅದರ ಸುರಕ್ಷತೆಯ ಜವಾಬ್ದಾರಿ ಮುಖ್ಯಶಿಕ್ಷಕರದ್ದಾಗಿರುತ್ತದೆ ಆದರೆ ಇಲ್ಲಿಯ ಸಂಪೂರ್ಣ ವಿಬಿನ್ನವಾಗಿದೆ.
ಶಾಲಾ ಆವರಣದಲ್ಲಿರುವ ಸಂಪ್ ನಿಂದ ಮಕ್ಕಳು ನೀರು ಸೇದುತ್ತಿರುವುದನ್ನು ನಾನು ನೋಡಿದೆ. ಮೊದಲಿಗೆ, ಯಾರೋ ಬಿದ್ದಿದ್ದಾರೆಂದು ನಾನು ಭಾವಿಸಿದೆ. ನಾನು ಅವರನ್ನು ಕೇಳಿದಾಗ, ಶಿಕ್ಷಕರು ನೀರಿನ ಸಂಪನ್ನು ಸ್ವಚ್ಛಗೊಳಿಸಲು ಹೇಳಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದರು.
ಇದೇ ವೇಳೆ, ಮಧ್ಯಾಹ್ನದ ಬಿಸಿಯೂಟದ ನಂತರ ವಿದ್ಯಾರ್ಥಿಗಳು ಕೈ ಮತ್ತು ಊಟದ ತಟ್ಟೆಗಳನ್ನು ತೊಳೆಯಲು ಸಾಕಷ್ಟು ನೀರಿನ ವ್ಯವಸ್ಥೆ ಇಲ್ಲದ ಕಾರಣ, ನೀರು ತರಿಸುವ ಕೆಲಸವನ್ನೂ ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತಿದೆ . ಅಲ್ಲದೆ ಶಾಲೆಯ ಸ್ವಚ್ಛತೆ ಸೇರಿದಂತೆ ಇನ್ನಿತರ ಕೆಲಸಗಳಿಗೂ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಪ್ರಶ್ನಾರ್ಥಕವಾಗಿದೆ.
ಶಾಲೆಯಲ್ಲಿ ನಡೆದಿದ್ದೇನು: ನಗರಗೆರೆ ಸರ್ಕಾರಿ ಶಾಲೆಯ ತೊಟ್ಟಿಯನ್ನು ಕೆಲವು ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಓರ್ವ ವಿದ್ಯಾರ್ಥಿ ಸ್ವಚ್ಛತೆ ಮಾಡಿ ತೊಟ್ಟಿಯಲಿರುವ ಕಸವನ್ನು ಕೊಂಡೊಯ್ಯುತ್ತಿದ್ದಾನೆ, ಮತ್ತೊಬ್ಬ ವಿದ್ಯಾರ್ಥಿ ಸಂಪ್ ತೊಟ್ಟಿಯನ್ನು ಸ್ವಚ್ಚಗೊಳಿಸಿದ ಹೊರಗೆ ಬರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.
ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಲಿಕೆಯ ವಾತಾವರಣಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ, ಶಿಕ್ಷಕರು ಈ ರೀತಿಯಾಗಿ ಮಕ್ಕಳಿಂದ ಅಪಾಯಕಾರಿ ಹಾಗೂ ಸಿಬ್ಬಂದಿ ನಿರ್ವಹಿಸಬೇಕಾದ ಕೆಲಸಗಳನ್ನು ಮಾಡಿಸುವುದು ಸರಿಯಲ್ಲ ನೀರಿನ ಸಂಪ್ ಒಳಗೆ ಮಕ್ಕಳನ್ನು ಇಳಿಸುವುದು ಅಪಾಯಕಾರಿಯಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಸಾಧ್ಯತೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮತ್ತು ಪಾಲಕರು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದೆ. ಆದ್ದರಿಂದ ನಗರಗೆರೆ ಶಾಲೆಯಲ್ಲಿ ನಡೆದಿರುವ ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಮಕ್ಕಳ ಕೈಯಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡಿಸುವುದು ಮಹಾಪರಾಧ ಈ ವಿಷಯ ತಿಳಿದ ಕೂಡಲೆ ಮುಖ್ಯ ಶಿಕ್ಷಕರಿಗೆ ನೋಟೀಸ್ ನೀಡಲಾಗಿದೆ. ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮುಂದೆಂದೂ ತಾಲ್ಲೂಕಿನಲ್ಲಿ ಇಂತಹ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗುವುದು.
ಕ್ಷೇತ್ರಶಿಕ್ಷಣಧಿಕಾರಿ,ಜಿ.ಗಂಗರೆಡ್ಡಿ.
ಡಿ ಗ್ರೂಪ್ ನೌಕರರು ಮತ್ತು ಅನುದಾನದ ಕೊರತೆಯಿಂದ ಶಾಲೆಯಲ್ಲಿ ಸ್ವಚ್ಛತೆ ಕಾರ್ಯ ಮಾಡುವವರಿಲ್ಲ ಆದ ಕಾರಣ ಸಂಪಿನಿಂದ ನೀರನ್ನು ತೆಗೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಶಿವಕುಮಾರ್, ಶಾಲಾ ಮುಕ್ಯೋಪಾಧ್ಯಾಯ
