ಶ್ರೀಗಳ ಜನ್ಮದಿನದ ಅಂಗವಾಗಿ ವೃದ್ಧಾಶ್ರಮ, ಅಲೆಮಾರಿ ಮಕ್ಕಳಿಗೆ ನೆರವು

ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಜೋಳಿಗೆ ಹಿಡಿದ ಪಟ್ಟದ್ದೇವರು

ಔರಾದ್: ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ. ಜೋಳಿಗೆ ಹಿಡಿದು ಗ್ರಾಮ ಗ್ರಾಮಗಳಿಗೆ ತೆರಳಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಹೇಳಿದರು.
ಗುರುವಾರ ಪಟ್ಟಣದ ಡಾ. ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮದಲ್ಲಿ ಹಣ್ಣು-ಹಂಪಲು ವಿತರಿಸುವ ಮೂಲಕ ಹಾಗೂ ಬಿಇಒ ಕಚೇರಿ ಬಳಿಯ ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಹಾಲು ಮತ್ತು ಹಣ್ಣು ವಿತರಿಸಿ ಶ್ರೀ ಗುರುಬಸವ ಪಟ್ಟದ್ದೇವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಯುವಕರು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಶ್ರೀ ಗುರುಬಸವ ಪಟ್ಟದ್ದೇವರು ಜೋಳಿಗೆ ಹಿಡಿದು ಗ್ರಾಮಗಳಿಗೆ ತೆರಳಿದರು. ದುರ್ಗುಣ ಭಿಕ್ಷೆ, ಸನ್ಮಾರ್ಗದ ದೀಕ್ಷೆ ಅಭಿಯಾನದ ಮೂಲಕ ಮದ್ಯದ ಬಾಟಲಿ, ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಸೇರಿದಂತೆ ವಿವಿಧ ದುಶ್ಚಟಗಳನ್ನು ಜನರಿಂದ ಭಿಕ್ಷೆಯಾಗಿ ಪಡೆದು, ಅವುಗಳಿಂದ ದೂರ ಉಳಿಯುವಂತೆ ಜಾಗೃತಿ ಮೂಡಿಸಿದರು. ಶ್ರೀಗಳ ಈ ಸಮಾಜಮುಖಿ ಕಾರ್ಯವನ್ನು ಗುರುತಿಸಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಕುಟುಂಬಗಳಲ್ಲಿ ನೆಮ್ಮದಿ ಮೂಡಿಸುವಲ್ಲಿ ಹಾಗೂ ಯುವಕರಿಗೆ ಉತ್ತಮ ದಾರಿ ತೋರಿಸುವಲ್ಲಿ ಶ್ರೀಗಳ ಸೇವೆ ಮಹತ್ವದ್ದಾಗಿದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ಶಿಕ್ಷಣ, ಸಂಸ್ಕಾರ ಮತ್ತು ಸೇವೆಯ ಮೂಲಕ ಸಮಾಜ ಪರಿವರ್ತನೆ ಮಾಡುವಲ್ಲಿ ಗುರುಬಸವ ಪಟ್ಟದ್ದೇವರ ಪಾತ್ರ ಶ್ಲಾಘನೀಯವಾಗಿದೆ ಎಂದರು. ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ದೊಡ್ಡ ಇತಿಹಾಸವಿದ್ದು, ಲಿಂಗೈಕ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಗುರುಬಸವ ಪಟ್ಟದ್ದೇವರು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಪಾರಮ್ಮ ವಾಘಮಾರೆ, ಅಧೀಕ್ಷಕ ನರಸಿಂಗ ವಾಘಮಾರೆ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಪತ್ರಕರ್ತ ರತಿಕಾಂತ ಖರಜಗೆ, ಉಪನ್ಯಾಸಕರಾದ ಮಹಾಂತೇಶ ಪಾಂಚಾಳ, ಶಿವಪುತ್ರ ಧರಣಿ, ಶೀಲಾಧರ ಕುಚಬಾಳ, ಸಂತೋಷ ಧೂಳಗಂಡೆ, ರಾಜಕುಮಾರ ಹಳ್ಳಿಕರ್, ಸುಧಾ ಕೌಟಗೆ, ಅಶ್ವಿನಿ ಹಿಂದೊಡ್ಡೆ, ಮಹೇಶ ಬಂಬುಳಗೆ ಸೇರಿದಂತೆ ಅನೇಕರು ಪಾಲ್ಗೊಂಡರು.

ವರದಿ : ರಾಚಯ್ಯ ಸ್ವಾಮಿ

error: Content is protected !!