ವಿಶೇಷ ವರದಿ
ನವೀನ್ ಕುಮಾರ್ ✍️
ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ದುರಂತದ ಕತ್ತಲೆ ಆವರಿಸಿದೆ. ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಅಗತ್ಯ ಸಾಮಗ್ರಿ ಹಾಗೂ ಹಣ್ಣು-ಹಂಪಲು ಖರೀದಿಸಲು ನಗರಕ್ಕೆ ಬಂದಿದ್ದ ತಾಯಿ ಮತ್ತು ಮಗ ಕೆಎಸ್ಆರ್ಟಿಸಿ (KSRTC) ಬಸ್ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟ ಘಟನೆ ಅಂಬೇಡ್ಕರ್ ವೃತ್ತದ ಬಳಿ ಸಂಭವಿಸಿದೆ.
ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದ ನಿವಾಸಿಯಾದ ನಾಗಮಣಿ (35) ಹಾಗೂ ಅವರ ಪುತ್ರ ಗಗನ್ (14) ಅವರ ತಮ್ಮ ಮೂವರು ಮಕ್ಕಳೊಂದಿಗೆ ಹಬ್ಬದ ಖರೀದಿಗಾಗಿ ನಗರಕ್ಕೆ ಬಂದಿದ್ದರು. ಸಾಮಗ್ರಿಗಳನ್ನು ಖರೀದಿಸಿ ಅಂಬೇಡ್ಕರ್ ವೃತ್ತದ ಬಳಿ ರಸ್ತೆ ದಾಟುತ್ತಿದ್ದಾಗ, ಬೆಂಗಳೂರು ಕಡೆಯಿಂದ ಅತಿ ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಇವರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಬಸ್ಸಿನ ಚಕ್ರದಡಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಇನ್ನೊಬ್ಬ ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಬ್ಬದ ಹೊಸ್ತಿಲಲ್ಲೇ ಒಂದೇ ಕುಟುಂಬದ ಇಬ್ಬರು ಸಾವಿನ ಸುದ್ದಿ ಕೇಳಿ ಕಾದಲವೇಣಿ ಗ್ರಾಮ ಶೋಕಸಾಗರದಲ್ಲಿ ಮುಲುಗಿದರು.
ಪೋಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ — ಗ್ರಾಮಸ್ಥರ ಗಂಭೀರ ಆರೋಪ:
ದುರಂತದ ಬಳಿಕ ಸ್ಥಳದಲ್ಲಿ ಜಮಾಯಿಸಿದ ಕಾದಲವೇಣಿ ಗ್ರಾಮಸ್ಥರು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆ ಹಾಗೂ ಸಂಚಾರ ನಿರ್ವಹಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಇಲ್ಲಿ ಸಿಗ್ನಲ್ ಅಳವಡಿಸಿದ್ದರೂ ಅದು ಕೇವಲ ಪ್ರದರ್ಶನಕ್ಕೆ ಮಾತ್ರ ಎಂಬಂತಾಗಿದೆ. ಸುಮಾರು ದಿನಗಳಿಂದ ಸಿಗ್ನಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸಂಚಾರ ನಿಯಂತ್ರಿಸಲು ಯಾವುದೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಇಲಾಖೆಯ ಈ ನಿರ್ಲಕ್ಷ್ಯವೇ ಈ ಭೀಕರ ಅಪಘಾತಕ್ಕೆ ಮೊದಲ ಮತ್ತು ಮುಖ್ಯ ಕಾರಣ. ಕೆಎಸ್ಆರ್ಟಿಸಿ ಬಸ್ ಚಾಲಕ ಅತಿಯಾದ ವೇಗದಲ್ಲಿ ಬಂದು ಹರಿದಿದ್ದರಿಂದಲೇ ಈ ಎರಡು ಜೀವಗಳು ಬಲಿಯಾಗಿವೆ.”
ಸ್ಥಳೀಯ ನಿವಾಸಿ ನಟರಾಜ್.
“ಪೊಲೀಸ್ ಇಲಾಖೆಯಿಂದ ಸಿಗ್ನಲ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಮತ್ತು ಸೂಕ್ತ ಸಿಬ್ಬಂದಿಯನ್ನು ಜಂಕ್ಷನ್ನಲ್ಲಿ ನಿಯೋಜಿಸದೇ ಇರುವುದು ಇಂತಹ ದುರಂತಕ್ಕೆ ನೇರ ಕಾರಣವಾಗಿದೆ. ಅಂಬೇಡ್ಕರ್ ವೃತ್ತದಂತಹ ಜನನಿಬಿಡ ಪ್ರದೇಶದಲ್ಲೇ ಈ ರೀತಿಯ ನಿರ್ಲಕ್ಷ್ಯ ವಹಿಸಿರುವುದು ಅಕ್ಷಮ್ಯ.”
ಸ್ಥಳೀಯ ಮುಖಂಡ ಯೋಗನಂದ
