ಮನಿಲಾದಲ್ಲಿ 23ನೇ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಮೋದಿ ಭಾಗವಹಿಸುವಿಕೆ

ಮನಿಲಾ: ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನಿಲಾದಲ್ಲಿ ನಡೆದ 23ನೇ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿದರು. ‘ನಮ್ಮ ಭವಿಷ್ಯವನ್ನು ಒಗ್ಗೂಡಿ ರೂಪಿಸೋಣ’ ಎಂಬ ಆಶಯದಡಿ ಆಸಿಯಾನ್ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಅವರು ಅಧ್ಯಕ್ಷ ಮಾರ್ಕೋಸ್ ಅವರನ್ನು ಅಭಿನಂದಿಸಿದರು.

ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಆಸಿಯಾನ್‌ನೊಂದಿಗಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಭಾರತ ನೀಡುತ್ತಿರುವ ಮಹತ್ವವನ್ನು ಒತ್ತಿಹೇಳಿದರು. ಮುಕ್ತ, ಸ್ವತಂತ್ರ, ಎಲ್ಲರನ್ನೂ ಒಳಗೊಳ್ಳುವ ಹಾಗೂ ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ನಂಬಿಕೆ ಇಟ್ಟಿದೆ ಎಂದು ತಿಳಿಸಿದ ಅವರು, ಈ ಪ್ರದೇಶದ ಭವಿಷ್ಯವು ಪೈಪೋಟಿಯಲ್ಲಿ ಅಲ್ಲ, ಸಹಕಾರವನ್ನು ಅವಲಂಬಿಸಿದೆ ಎಂದು ಹೇಳಿದರು. ಆಸಿಯಾನ್‌ನ ಏಕತೆ ಮತ್ತು ಕೇಂದ್ರೀಯತೆಗೆ ಭಾರತ ದೃಢವಾಗಿ ಬದ್ಧವಾಗಿದೆ ಎಂದರು.

2027ನೇ ವರ್ಷವು ಭಾರತ-ಆಸಿಯಾನ್ ಸಂಬಂಧಗಳ ಪಾಲಿಗೆ ವಿಶೇಷ ವರ್ಷವಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ 35 ವರ್ಷಗಳು ಮತ್ತು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷಗಳು ತುಂಬುತ್ತವೆ ಎಂದು ಹೇಳಿದರು. ಭಾರತದ ‘ಆಕ್ಟ್ ಈಸ್ಟ್ ನೀತಿ’ಯು ಭಾರತ-ಆಸಿಯಾನ್ ಸಂಬಂಧಗಳಿಗೆ ಹೊಸ ವೇಗ ನೀಡಿದೆ ಎಂದರು.

ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪ್ರಧಾನಮಂತ್ರಿ ಹಲವು ಪ್ರಸ್ತಾವನೆಗಳನ್ನು ಮುಂದಿಟ್ಟರು. ಆಸಿಯಾನ್-ಭಾರತ ಕಡಲ ಸಹಕಾರ ಯೋಜನೆ, ಜಂಟಿ ಸೈಬರ್ ವಿಧಿವಿಜ್ಞಾನ ತರಬೇತಿ, ಪರಮಾಣು ಇಂಧನ ತಾಂತ್ರಿಕ ವಿನಿಮಯ, ಬಾಹ್ಯಾಕಾಶ ಹ್ಯಾಕಥಾನ್, ನಿರ್ಣಾಯಕ ಖನಿಜಗಳ ಸಹಕಾರ, ಯುವ ಸಂಪರ್ಕ ಮತ್ತು ನಳಂದಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಹೆಚ್ಚಳ ಸೇರಿದಂತೆ ಹಲವು ಪ್ರಸ್ತಾವನೆಗಳನ್ನು ಮಂಡಿಸಿದರು. ಆಸಿಯಾನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಉಚಿತ ಇ-ವೀಸಾ ಸೌಲಭ್ಯ ನೀಡುವುದಾಗಿಯೂ ಘೋಷಿಸಿದರು.

ನಾಯಕರು ವಿಪತ್ತು ನಿರ್ವಹಣೆಯಲ್ಲಿ ಸಹಕಾರ ಕುರಿತ ಆಸಿಯಾನ್-ಭಾರತ ಜಂಟಿ ಹೇಳಿಕೆಯನ್ನು ಅಂಗೀಕರಿಸಿದರು. ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಫಿಲಿಪ್ಪೀನ್ಸ್ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಮಂತ್ರಿ, ಮುಂದಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿರುವ ಸಿಂಗಾಪುರದ ಪ್ರಧಾನಮಂತ್ರಿಗೆ ಶುಭಾಶಯಗಳನ್ನು ತಿಳಿಸಿದರು.

error: Content is protected !!