ಕೊಲಂಬೊ: ಶ್ರೀಲಂಕಾದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಕನಿಷ್ಠ 31 ಜನರು ಮೃತಪಟ್ಟು 14 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದುಲ್ಲಾದ ಮಧ್ಯ ಚಹಾ ಬೆಳೆಯುವ ಜಿಲ್ಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಅಲ್ಲಿ ಪರ್ವತ ಇಳಿಜಾರುಗಳಲ್ಲಿ ಭೂಕುಸಿತ ಉಂಟಾಗಿ ಮನೆಗಳ ಮೇಲೆ ಬಿದ್ದು 16 ಜನರು ಜೀವಂತ ಸಮಾಧಿಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ಹೇಳಿಕೆಯಲ್ಲಿ ತಿಳಿಸಿದೆ.
ಪಕ್ಕದ ನುವಾರ ಎಲಿಯಾ ಜಿಲ್ಲೆಯಲ್ಲಿ ಇದೇ ರೀತಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಸಾವುನೋವುಗಳು ಬೇರೆಡೆ ವರದಿಯಾಗಿವೆ.
ಭೂಕುಸಿತದಲ್ಲಿ ಸುಮಾರು 400 ಮನೆಗಳು ಹಾನಿಗೊಳಗಾಗಿದ್ದು, 1,100 ಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಗೊಂಡಿವೆ.
ಶ್ರೀಲಂಕಾದಾದ್ಯಂತ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ತಗ್ಗು ಪ್ರದೇಶಗಳ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.
ಶ್ರೀಲಂಕಾ ಪ್ರಸ್ತುತ ಈಶಾನ್ಯ ಮಾನ್ಸೂನ್ ಋತುವನ್ನು ಅನುಭವಿಸುತ್ತಿದೆ, ಅದರ ಪೂರ್ವಕ್ಕೆ ವಾಯುಭಾರ ಕುಸಿತದಿಂದಾಗಿ ಮಳೆ ತೀವ್ರಗೊಂಡಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಹವಾಮಾನ ವೈಪರೀತ್ಯದ ಕಾರಣ ಸರ್ಕಾರ ದೇಶಾದ್ಯಂತ ಶಾಲಾ ಪರೀಕ್ಷೆಗಳನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಿದೆ.
