ಅಬುಧಾಬಿ: ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಶನಿವಾರ ಮುಂಜಾನೆ ವರದಿಯಾಗಿದೆ.
ಮೃತರು ಒಡಹುಟ್ಟಿದವರಾಗಿದ್ದು, ಅವರೆಲ್ಲರೂ ತಮ್ಮ ಕುಟುಂಬದ ಮನೆ ಸಹಾಯಕಿಯೊಂದಿಗೆ ವಾಹನದಲ್ಲಿ ಪ್ರಯಾಣಿಸುವಾಗ ಅಬುಧಾಬಿ-ದುಬೈ ಹೆದ್ದಾರಿಯ ಶಹಾಮಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತಕ್ಷಣವೇ ತುರ್ತು ಸೇವೆಗಳಿಗೆ ಮಾಹಿತಿ ನೀಡಿದರೂ, ಅವರೆಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಕೇರಳ ಮೂಲದ ಕುಟುಂಬವೊಂದಕ್ಕೆ ಸೇರಿದ ಈ ಮೂವರು ಮಕ್ಕಳು ರಾಸ್ ಅಲ್ ಖೈಮಾ ದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದಾಗ ಅವರು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು ಎಂದು ವರದಿಯಾಗಿದೆ.
