ರಾಮದುರ್ಗ – ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿಜೀಯು ಶಾಂತಿ ಮತ್ತು ಅಹಿಂಸಾ ತತ್ವವನ್ನು ಅನುಸರಿಸಿ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಹೇಳಿದರು.
ಕಸಾಪ ರಾಮದುರ್ಗ ವತಿಯಿಂದ ಇಲ್ಲಿನ ಸರಕಾರಿ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ ೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಮದುರ್ಗ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧಿಜೀಯವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗಾಂಧೀಜಿ ಇಡೀ ಜಗತ್ತಿಗೆ ಶಾಂತಿ ಮತ್ತು ಸಹೋದರತೆಯನ್ನು ಸಾರಿದರು. ಅವರ ಸ್ಮರಣೆಗಾಗಿ ವಿಶ್ವಸಂಸ್ಥೆ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಚ್.ಚಾಬುಕಸ್ವಾರ ಹೇಳಿದರು.
ಶಿಕ್ಷಣ ಸಂಯೋಜಕ ಶ್ರೀಕಾಂತ ಕರಲಿಂಗಪ್ಪನವರ ಮಾತನಾಡಿ ಗಾಂಧೀಜಿ ಅವರು ಪ್ರಾಮಾಣಿಕತೆ ಹಾಗೂ ಸತ್ಯ ನುಡಿಯುವುದನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಂಡಿದ್ದರು. ವಿದ್ಯಾರ್ಥಿಗಳು ಸಹ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಗಾಂಧಿ ಓದು ನಿಮಿತ್ಯ ಗಾಂಧೀಜಿಯ ಜೀವನ, ಸಾಧನೆ ಕುರಿತು ಬೋಳುವಾರು ಮಹಮ್ಮದ್ ಕುಂಞ ಅವರು ಮಕ್ಕಳಿಗಾಗಿ ಬರೆದ ಪಾಪು ಬಾಪು ಕೃತಿಯನ್ನು 26 ವಿದ್ಯಾರ್ಥಿಗಳು ವಾಚನ ಮಾಡಿದರು.
ಈ ಸಂಧರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ, ಅರಣ್ಯಾಧಿಕಾರಿ ಪ್ರತಿಭಾ ಕೊಪ್ಪಳ, ಗೌರವ ಕೋಶಾಧ್ಯಕ್ಷ ಎಸ್. ಎಸ್ ಹುಚ್ಚನ್ನವರ, ಆರ್.ಆಸ್.ಸಂಕನ್ನವರ, ಅರಣ್ಯ ಇಲಾಖೆಯ ಆನಂದ ಮಸಳಿ ಇತರರು ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಆರ್.ಕೆ.ಬಿಕ್ಕಣ್ಣವರ ಸ್ವಾಗತಿಸಿದರು. ಶಿಕ್ಷಕ ಎನ್.ಎ.ಶೇಖ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸದಸ್ಯ ಎಸ್.ಸಿ.ಹುರಕಡ್ಲಿ ವಂದಿಸಿದರು.
ವರದಿ-Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ