ನವರಾತ್ರಿ ಉತ್ಸವದ ಮೊದಲನೇ ದಿನವಾದ ಗುರುವಾರ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸ್ವಗ್ರಾಮ ಬೋಂತಿ ತಾಂಡಾದಲ್ಲಿನ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನೊಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು.
ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಪೂಜೆಗಳನ್ನು ಆರಂಭಿಸಿದ ಶಾಸಕರು, ಗ್ರಾಮದಲ್ಲಿನ ಮಾತಾ ಜಗದಂಬಾ ದೇವಿ, ಸಂತ ಸೇವಾಲಾಲ್ ಮಹಾರಾಜರು ಮತ್ತು ರಾಮರಾವ ಮಹಾರಾಜರ ದೇವಸ್ಥಾನದಲ್ಲಿ ಪೂಜೆ, ಅರ್ಚನೆ, ಅಭಿಷೇಕದಂತಹ ಪೂಜಾ ಕೈಂಕರ್ಯಗಳನ್ನು ಭಕ್ತಿ ಭಾವದಿಂದ ನೆರವೇರಿಸಿದರು.
ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಪರಮ ಭಕ್ತರಾಗಿರುವ ಶಾಸಕರು ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸುತ್ತಾರೆ. ನವರಾತ್ರಿ ಉತ್ಸವ ಮುಗಿಯುವ ವರೆಗೆ ಒಂಬತ್ತು ದಿನ ಶಾಸಕರು ಸ್ವ-ಗ್ರಾಮದಲ್ಲಿದ್ದು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ, ಅರ್ಚನೆಗಳನ್ನು ನೆರವೇರಿಸುತ್ತಾರೆ.
ಬಳಿಕ ಮಾತನಾಡಿದ ಅವರು, ಕುಲದೇವತೆಯಾಗಿರುವ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಶಕ್ತಿ ಅಪಾರವಾಗಿದೆ. ದೇವರ ಮೊರೆ ಹೋಗುವ ಭಕ್ತರ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ. ಬದುಕು ಸುಂದರವಾಗುತ್ತದೆ. ಮಾತೆಯ ಕೃಪೆ ಮತ್ತು ಮಹಾ ಜನತೆಯ ಆಶೀರ್ವಾದದಿಂದಾಗಿ ಉತ್ತಮವಾಗಿ ಜನಸೇವೆ ಮಾಡುತ್ತಿದ್ದೇನೆ ಎಂದರು.
ಪ್ರತಿ ವರ್ಷ ಬೋಂತಿ ತಾಂಡಾದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಗೆ ವಿಶೇಷ ಪೂಜೆ ನೆರವೇರಿಸಿ ಕ್ಷೇತ್ರದ ಜನತೆಗೆ ಒಳಿತಾಗಲೆಂದು ಮತ್ತು ರೈತರು, ಕಾರ್ಮಿಕರು ಸೇರಿದಂತೆ ಎಲ್ಲರ ಜೀವನ ಸುಖಮಯವಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರತೀಕ್ ಚವ್ಹಾಣ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ