ಪ್ರಕರಣದಲ್ಲಿ ಮುಸ್ಲಿಮರ ಹೆಸರು ಇದ್ದರೆ ಮಾತ್ರ ಬಿಜೆಪಿಯ ಹೋರಾಟ: ಸಂತೋಷ್‌ ಲಾಡ್

ಹುಬ್ಬಳ್ಳಿ: ಯಾವುದೇ ಪ್ರಕರಣದಲ್ಲಿ ಮುಸ್ಲಿಮರ ಹೆಸರು ಕೇಳಿಬಂದಾಗ ಮಾತ್ರ ಬಿಜೆಪಿಯವರು ಹೋರಾಟಕ್ಕೆ ಬರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕುಟುಕಿದರು.

 

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವ ಮೂಲಕ ಕಾಂಗ್ರೆಸ್‌ನವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳಿಂದ ಇಂತಹ ಎಷ್ಟೋ ಘಟನೆಗಳಾಗಿವೆ. ಆದರೆ ಅವರು ಅವುಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

 

ಸಚಿವ ಸಂಪುಟದ ಉಪ ಸಮಿತಿ ನಿರ್ಧಾರದ ಮೇಲೆ ಹಳೇಹುಬ್ಬಳ್ಳಿ ಗಲಭೆ ಸೇರಿ 42 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಸಮರ್ಥಿಸಿದರು.

ಹರಿಯಾಣದಲ್ಲಿ ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಾಬಾ ರಾಮ ರಹೀಮ ಚುನಾವಣೆ ಸಂದರ್ಭದಲ್ಲಿ ಪೆರೋಲ್ ಮೇಲೆ ಹೊರಗೆ ಬರುತ್ತಾರೆ ಇದರ ಅರ್ಥವೇನು? ಇದು ತುಷ್ಟೀಕರಣ ರಾಜಕಾರಣ ಅಲ್ಲವೇ? ಎಂದರು.

 

ಶಾಸಕ ವಿನಯ ಕುಲಕರ್ಣಿ ಕೇಸ್ ಸಿಬಿಐಗೆ ನೀಡಬೇಕೆಂಬ ಬಿಜೆಪಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನಾತ್ಮಕವಾಗಿ ಅವರೇನು ಒತ್ತಾಯ ಮಾಡುತ್ತಾರೆ ಮಾಡಲಿ. ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ. ಅದರ ಬಗ್ಗೆ ನಾನೇನು ಮಾತನಾಡಲ್ಲ ಎಂದರು.

error: Content is protected !!