ಔರಾದ ತಾಲ್ಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ 560.70 ಕೋಟಿಯ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದು ಎರಡು ವರ್ಷಗಳಾದರೂ ಕಾಮಗಾರಿ ಆರಂಭಿಸುತ್ತಿಲ್ಲ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯದ ಉಪ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಕಾವೇರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರಗಳನ್ನು ಸಲ್ಲಿಸಿದ್ದು, ಹಿಂದೆ ನಮ್ಮ ಸರ್ಕಾರದಿಂದ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಕ್ಯಾಬಿನೆಟ್ ನಿಂದ ಅನುಮೋದನೆ ಪಡೆದು ಟೆಂಡರ್ ಕೂಡ ಆಗಿತ್ತು. ಆದರೂ ಕೆಲಸ ಆರಂಭಿಸಿಲ್ಲ. ಹಿಂದೆಯೂ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಯೋಜನೆ ಆರಂಭಿಸುವಂತೆ ಒತ್ತಾಯಿಸಿದ್ದೆ. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಪುನಃ ಪತ್ರ ಬರೆಯಲಾಗಿದೆ. ಟೆಂಡರ್ ರದ್ದುಪಡಿಸಿರುವ ಬಗ್ಗೆ ಮಾಹಿತಿಯಿದ್ದು, ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಔರಾದಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಔರಾದ(ಬಿ) ಕ್ಷೇತ್ರದಲ್ಲಿ ಬೃಹತ್ ನೀರಾವರಿ ಯೋಜನೆಗಳು ಇಲ್ಲ. ಹಾಗಾಗಿ ಹೆಚ್ಚಿನ ರೈತರು ಒಣ ಬೇಸಾಯವನ್ನು ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ಎಲ್ಲ ಕೆರೆಗಳಲ್ಲಿ ನೀರಿನ ಕೊರತೆಯಾಗಿ ಅಂತರ್ಜಲ ಮಟ್ಟವೂ ಕುಸಿಯುತ್ತದೆ. ಇದರಿಂದ ಕುಡಿಯುವ ನೀರಿಗೂ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಕುಡಿಯುವ ನೀರಿನ ಪೂರೈಕೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ನಿರಂತರ ಶ್ರಮ ವಹಿಸುತ್ತಿದ್ದೇನೆ.
ಹಿಂದೆ ನಾನು ಸಚಿವನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಔರಾದನಲ್ಲಿ ಕೆರೆ ತುಂಬಿಸುವ ಯೋಜನೆ ಅತ್ಯಂತ ಅವಶ್ಯಕತೆಯಿದೆ ಎಂದು ಮನವರಿಕೆ ಮಾಡಿಸಿ ಪಟ್ಟು ಹಿಡಿದು 560.70 ಕೋಟಿಯ ಯೋಜನೆಗೆ ಅನುಮೋದನೆ ಪಡೆದಿದ್ದೇನೆ. ಇದರಡಿ ಔರಾದ ತಾಲ್ಲೂಕಿನ ಬಳತ (ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್ ಮೇಲ್ ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿ.ಎಂ.ಸಿ ನೀರನ್ನೆತ್ತಿ 36 ಕೆರೆಗಳನ್ನು ತುಂಬಿಸಲಾಗುತ್ತದೆ.
30 ಸಣ್ಣ ನೀರಾವರಿ ಕೆರೆಗಳು ಮತ್ತು 6 ಇಂಗು ಕೆರೆಗಳು ಸೇರಿ 36 ಕೆರೆಗಳಿಗೆ ನೀರು ತುಂಬಿಸುವುದರಿಂದ ಕ್ಷೇತ್ರದಲ್ಲಿ ಎಲ್ಲ ಕಾಲಗಳಲ್ಲಿಯೂ ನೀರು ಲಭ್ಯವಿರಲಿದ್ದು, ಸುಮಾರು 8,188 ಹೆಕ್ಟೇರ್ ಪ್ರದೇಶಕ್ಕೆ ನೀರು ಲಭಿಸಲಿದೆ. ಈ ಯೋಜನೆಯಿಂದ ನೀರಿನ ಕೊರತೆ ನೀಗಿಸಿ ರೈತರಿಗೂ ವರದಾನವಾಗಿ ಪರಿಣಮಿಸಲಿದೆ. ಇನ್ನು ವಿಳಂಬ ಮಾಡದೇ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಕ್ಷೇತ್ರದ ರೈತರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ