ನವದೆಹಲಿ: ತನ್ನ ಮದುವೆ ಕಾರ್ಡ್ ಹಂಚಲು ಹೋಗುತ್ತಿದ್ದ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿರುವ ಘಟನೆ ಶನಿವಾರ (ಜ.18ರಂದು) ರಾತ್ರಿ ದೆಹಲಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಗ್ರೇಟರ್ ನೋಯ್ಡಾದ ನವಾಡ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ಅನಿಲ್ ಅವರ ವಿವಾಹ ಫೆಬ್ರವರಿ 14 ರಂದು ನಿಗದಿಯಾಗಿತ್ತು ಎಂದು ವರದಿ ತಿಳಿಸಿದೆ.
ಶನಿವಾರ ಮಧ್ಯಾಹ್ನ ಅನಿಲ್ ತನ್ನ ಲಗ್ನ ಪತ್ರಿಕೆಯನ್ನು ವಿತರಿಸಲು ಮನೆಯಿಂದ ತೆರಳಿದ್ದರು. ತಡರಾತ್ರಿಯವರೆಗೆ ಹಿಂತಿರುಗದಿದ್ದಾಗ, ನಾವು ಅವನಿಗೆ ಕರೆ ಮಾಡಲು ಪ್ರಯತ್ನಿಸಿದೆವು ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. 11-11:30 ರ ಸುಮಾರಿಗೆ ಕಾರು ಅಪಘಾತವಾಗಿ ಅನಿಲ್ ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿ ತಿಳಿಸಿದ್ದಾರೆ ಎಂದು ಅನಿಲ್ ಅವರ ಹಿರಿಯ ಸಹೋದರ ಸುಮಿತ್ ಹೇಳಿದ್ದಾರೆ.
ಅನಿಲ್ ಅವರು ಸಂಚರಿಸುತ್ತಿದ್ದ ವ್ಯಾಗನ್ ಆರ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಅನಿಲ್ ಕಾರಿನೊಳಗೆಯೇ ಸುಟ್ಟು ಕರಕಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಾರಿಗೆ ಬೆಂಕಿ ಹೇಗೆ ತಗುಲಿದೆ ಎನ್ನುವುದರ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.