ಕಟ್ಟಡ ಕಾರ್ಮಿಕರ ಯೋಜನೆಗಳ ಪ್ರಚಾರವಾಗಲಿ: ಶಾಸಕ ಪ್ರಭು ಚವ್ಹಾಣ

ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಇವುಗಳ ಬಗ್ಗೆ ಸೂಕ್ತ ಪ್ರಚಾರ ನೀಡಬೇಕು ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ತರಬೇತಿ ಪೂರ್ಣಗೊಳಿಸಿದ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪ್ರಮಾಣ ಪತ್ರಗಳು ಹಾಗೂ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಕೈ ಬಲಪಡಿಸಬೇಕು. ಅವರು ಸುರಕ್ಷತೆ ಮತ್ತು ನೆಮ್ಮದಿಯ ಜೀವನ ನಡೆಸಬೇಕೆಂಬ ಸಂಕಲ್ಪದೊAದಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಅವರ ಆಶಯದಂತೆ ಕಾರ್ಮಿಕರ ಜೀವನ ಸುಧಾರಿಸಬೇಕು. ಈ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿವೆ. ಇವುಗಳ ಬಗ್ಗೆ ಅನೇಕರಿಗೆ ಮಾಹಿತಿಯೇ ಇರುವುದಿಲ್ಲ. ಹಾಗಾಗಿ ಯೋಜನೆಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಪ್ರತಿ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಯುವಂತಾಗಬೇಕು ಎಂದು ಹೇಳಿದರು.
ಪಿಂಚಣಿ ಯೋಜನೆ, ವೈದ್ಯಕೀಯ ನೆರವು, ಕಾರ್ಮಿಕರ ಕಿಟ್ ವಿತರಣೆ, ಮಕ್ಕಳಿಗೆ ವಿದ್ಯಾರ್ಥಿವೇತನ, ವಿವಾಹ ಸಹಾಯಧನದಂತಹ ಸಾಕಷ್ಟು ಯೋಜನೆಗಳಿವೆ. ಇವುಗಳ ಲಾಭ ಕಾರ್ಮಿಕರಿಗೆ ಸಿಗಬೇಕು. ಅಧಿಕಾರಿಗಳು ಈ ದಿಶೆಯಲ್ಲಿ ಇನ್ನಷ್ಟು ಜಾಗೃತೆಯಿಂದ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಬಡ ಕಾರ್ಮಿಕರು ಪ್ರತಿದಿನ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿರುತ್ತಾರೆ. ಸರ್ಕಾರದ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂಥವರಿಗೂ ಸೌಲಭ್ಯಗಳು ದೊರೆಯಬೇಕು. ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳ ವಸತಿ ರಹಿತರಿಗೆ ಮನೆಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ವಸತಿ ಯೋಜನೆಗೆ ಕಾರ್ಮಿಕರನ್ನು ಪರಿಗಣಿಸಬೇಕು. ಮನೆಗಳಿಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಫುಲಾರಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಕಟ್ಟಡ ಹಾಗೂ ಮತ್ತಿತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳು ಮತ್ತು ಅವುಗಳನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಶಾಸಕರಿಂದ ಕಟ್ಟಡ ಹಾಗೂ ಮತ್ತಿತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಕಿಟ್‌ಗಳನ್ನು ಮತ್ತು ತರಬೇತಿ ಪಡೆದ ಕಾರ್ಮಿಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಔರಾದ ವೃತ್ತ ಕಾರ್ಮಿಕ ನಿರೀಕ್ಷಕ ರಾಹುಲ್ ರತ್ನಾಕರ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ ಸೇರಿದಂತೆ ಮುಖಂಡರು, ವಿವಿಧ ಅಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ : ರಾಚಯ್ಯ ಸ್ವಾಮಿ

error: Content is protected !!