ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ವಿಜಯಪುರಕ್ಕೆ ಬಂದಿಳಿದ ಸಚಿವ ಕೃಷ್ಣ ಬೈರೇಗೌಡ – ಸರಳತೆ ಯಿಂದ ಬಿಜಾಪುರ ಜನಮನ ಗೆದ್ದ ನಾಯಕ

ಬಿಜಾಪುರ: ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಬಿಜಾಪುರಕ್ಕೆ ಆಗಮಿಸಿದ ರೀತಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ! ಯಾವುದೇ ಆಡಂಬರವಿಲ್ಲದೆ, ಅಧಿಕಾರಿಗಳ ಬೆಂಗಾವಲು ವಾಹನಗಳಿಲ್ಲದೆ, ಸಚಿವರು ನೇರವಾಗಿ ಕೆಎಸ್‌ಆರ್‌ಟಿಸಿ ಕಲ್ಯಾಣ ರಥ ಬಸ್ಸಿನಲ್ಲಿ ಪ್ರಯಾಣಿಸಿ ಅಂಬೇಡ್ಕರ್ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮತ್ತು ಮೆಚ್ಚುಗೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಸಚಿವರು ಭದ್ರತಾ ಸಿಬ್ಬಂದಿ ಮತ್ತು ವಾಹನಗಳ ದಂಡಿನೊಂದಿಗೆ ಆಗಮಿಸುವುದನ್ನು ಕಂಡಿದ್ದ ಜನತೆಗೆ, ಕೃಷ್ಣ ಬೈರೇಗೌಡ ಅವರು ಜನಸಾಮಾನ್ಯರೊಂದಿಗೆ ಬೆರೆತು ಒಂದೇ ಬಸ್ಸಿನಲ್ಲಿ ಪ್ರಯಾಣಿಸಿದ್ದು ನಿಜಕ್ಕೂ ಹೊಸ ಅನುಭವವಾಗಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಚಿವರ ಸರಳತೆಗೆ ಬೆರಗಾದರು. ಅನೇಕರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡರೆ, ಕೆಲವರು ಸಚಿವರೊಂದಿಗೆ ಆತ್ಮೀಯವಾಗಿ ಮಾತನಾಡಿದರು ಮತ್ತು ಸೆಲ್ಫಿ ತೆಗೆದುಕೊಂಡರು.

ಕೃಷ್ಣ ಬೈರೇಗೌಡ ಅವರ ಈ ನಡೆ ಜನಸಾಮಾನ್ಯರ ಬದುಕಿನಲ್ಲಿ ಬೆರೆತು ಅವರೊಂದಿಗೆ ಪ್ರಯಾಣಿಸುವಂತಹ ನಾಯಕರಿಗಷ್ಟೇ ಪ್ರಜೆಯ ಹೃದಯವನ್ನು ಗೆಲ್ಲಲು ಸಾಧ್ಯ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅವರ ಈ ಸರಳತೆಯ ನಡೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದೆ. ಸಚಿವರ ಈ ವಿನಮ್ರತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಒಟ್ಟಾರೆಯಾಗಿ, ಕೃಷ್ಣ ಬೈರೇಗೌಡ ಅವರ ಈ ನಡೆ ಸಾರ್ವಜನಿಕ ಸೇವೆಯಲ್ಲಿರುವವರಿಗೆ ಒಂದು ಸ್ಪೂರ್ತಿದಾಯಕ ಮಾದರಿಯಾಗಿದೆ. ಡಾ. ಅಂಬೇಡ್ಕರ್ ಅವರ ಕನಸಿನಂತೆ ಧರ್ಮ, ಜಾತಿ, ವರ್ಗದ ಭೇದವಿಲ್ಲದೆ ಎಲ್ಲರ ಹಿತವನ್ನು ಬಯಸುವ ನಾಯಕತ್ವ ಸರಳತೆಯ ಮೂಲಕ ಮೂಡಿಬರುತ್ತಿರುವುದು ನಿಜಕ್ಕೂ ಆಶಾದಾಯಕವಾಗಿದೆ. ಈ ಕ್ಷಣ ಸಾರ್ವಜನಿಕ ಸೇವೆಗೆ ಸಾತ್ವಿಕತೆಯ ಸ್ಪರ್ಶ ನೀಡಿದೆ ಎಂದರೆ ತಪ್ಪಾಗಲಾರದು.

ವರದಿ : ಅಜೀಜ ಪಠಾಣ.

error: Content is protected !!