ವಡಗಾಂವದಲ್ಲಿ ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ !
ಔರಾದ್ : ತಾಲ್ಲೂಕಿನ ವಡಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ, ಕಾಯಕ ಮಾಸಚಾರಣೆ ಹಾಗೂ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಬೇಸಿಗೆ ಕಾಲದಲ್ಲಿ ಉದ್ಯೋಗ ಆರಿಸಿ ಕೊಂಡು ಯಾರು ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ವಲಸೆ ಹೋಗಬಾರದು. ಇದ್ದ ಊರಲ್ಲೇ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಖಾತ್ರಿ ಇದ್ದು, ಬೇಸಿಗೆ ಮುಗಿಯುವವರೆಗೂ ನಿಮ್ಮ ಕೂಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಡವರ ಪರವಾಗಿ ಇರುವ ಯೋಜನೆ ಇದಾಗಿದೆ. ಆದ್ದರಿಂದ ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುವುದರ ಜತೆಗೆ, ನಿಮ್ಮ ಮನೆಯ ಪಕ್ಕದ ಜನರಿಗೂ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿ ಇನ್ನೂ ಹೆಚ್ಚಿನ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಪಿಡಿಒ ಅನಿಲಕುಮಾರ ಪಾಟೀಲ್ ಮಾತನಾಡಿ, ಗುಳೆ ತಪ್ಪಿಸಲು ಸತತ ಮೂರು ತಿಂಗಳ ಕಾಲ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ನರೇಗಾ ಕೂಲಿ 349ರಿಂದ 370ಕ್ಕೆ ಹೆಚ್ಚಿಸಲಾಗಿದ್ದು ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಮುಖರಾದ ಗ್ರಾಪಂ ಅಧ್ಯಕ್ಷ ರಾಜಕುಮಾರ ಹೇಡೆ, ತಾಂತ್ರಿಕ ಸಂಯೋಜಕ ಆನಂದ, ಟಿಎ ಸಂದೀಪ, ಮಾಣಿಕ, ಸುಂದರ, ಕೇಸರಿ, ಸಂಜುಮಾರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡರು.
ಕೂಲಿಕಾರರ ಆರೋಗ್ಯ ತಪಾಸಣೆ :
ಈ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಅಭಿಯಾನದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನರೇಗಾ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ತಾಪಂ ಎಡಿ ಶಿವಕುಮಾರ ಘಾಟೆ ಹೇಳಿದರು. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಆನಂದ ಸೇರಿದಂತೆ ಇತರರಿದ್ದರು.
ವರದಿ : ರಾಚಯ್ಯ ಸ್ವಾಮಿ
