ತಂಬಾಕು ಉತ್ಪನ್ನ ಮಾರಲು ಪ್ರತ್ಯೇಕ ಲೈಸೆನ್ಸ್‌?

ಬೆಂಗಳೂರು: ರಾಜಧಾನಿ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕ್ರಮ ಕೈಗೊಂಡಿದೆ. ಬೀಡಿ, ಸಿಗರೆಟ್‌, ತಂಬಾಕು, ಗುಟ್ಕಾ ಸೇರಿದಂತೆ ತಂಬಾಕಿನ ಇನ್ನಿತರ ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಲು ಪ್ರತ್ಯೇಕ ಮಾರಾಟ ಪರವಾನಗಿ ತೆಗೆದು ಕೊಳ್ಳಬೇಕೆಂಬ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.

ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಬೇಕಾದರೆ 500 ರೂ. ವಾರ್ಷಿಕ ಶುಲ್ಕ ನೀಡಿ ಹೊಸ ಲೈಸೆನ್ಸ್‌ ಪಡೆಯುವುದು ಕಡ್ಡಾಯವಾಗಲಿದೆ. ಆದರೆ, ಫ‌ುಟ್‌ಪಾತ್‌ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಎಲ್ಲೆಂದರಲ್ಲಿ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಪಾಲಿಕೆ ಅಧಿಕಾರಿಗಳು ತಪಾಸಣೆಗೆ ಬಂದರೆ 5 ಸಾವಿರ ರೂ. ವರೆಗೆ ದಂಡ ಹಾಕುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ದಿನೇ ದಿನೆ ತುಂಬಾಕು ಉತ್ಪನ್ನಗಳ ಮಾರಾಟ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಮತ್ತಷುc ಬಿಗಿ ಕ್ರಮಗಳನ್ನು ಕೈಗೊಳ್ಳಲು ಹಲವು ನಿಯಮಗಳನ್ನು ರೂಪಿಸುತ್ತಿದೆ.

ಸೆಪ್ಟೆಂಬರ್‌ನಲ್ಲಿ ಆದೇಶ ಜಾರಿಗೆ ಬರಲಿದೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಅಂಗಡಿಗಳ ಮಾಲೀಕರು ತುಂಬಾಕು ಉತ್ಪನ್ನಗಳ ಮಾರಾಟ ಪರವಾನಗಿ ಪಡೆದಿದ್ದಾರೆ. ಇನ್ನೂ ಕೆಲವರು ಪರವಾನಗಿ ಪಡೆಯದೇ ಮಾರಾಟ ಮಾಡುತ್ತಿದ್ದು, ಯಾರು ಇದುವರೆಗೂ ತಂಬಾಕು ಉತ್ಪನ್ನಗಳ ಮಾರಾಟ ಪಡೆಯಲಿಲ್ಲವೋ ಅವರು ವಾರ್ಷಿಕ ಪರವಾನಗಿ ಶುಲ್ಕ ನೀಡಿ ಮಾರಾಟ ಪರವಾನಗಿ ಪಡೆಯಬೇಕು. ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಲೈಸೆನ್ಸ್‌ ಜೋಡಣೆ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಶೀಘ್ರದಲ್ಲೆ ನಡೆಸಲಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಬೆಂಗಳೂರಿನಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿದ್ದು ತಂಬಾಕು ಮಾರಾಟ ಮಾಡುವ ಎಲ್ಲಾ ಮಾರಾಟಗಾರರು ನಿರ್ದಿಷ್ಟ ಪರವಾನಗಿ ಪಡೆಯಬೇಕು ಎಂದು ಕಡ್ಡಾಯಗೊಳಿಸಿದೆ. ಪ್ರತ್ಯೇಕ ಪರವಾನಗಿ ನೀಡುವ ಕುರಿತಂತೆ ಪಾಲಿಕೆ ಆರೋಗ್ಯ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದ್ದು, ಸೆಪ್ಟೆಂಬರ್‌ನಲ್ಲಿ ಲೈಸೆನ್ಸ್‌ ನೀಡುವ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.

ಬೀದಿ ವ್ಯಾಪಾರಿಗಳು ಪರವಾನಿಗೆ ಪಡೆಯಲು ಅರ್ಹರಲ್ಲ: ಬಿಬಿಎಂಪಿ ಸುಮಾರು 49 ಸಾವಿರ ವ್ಯಾಪಾರಿಗಳಿಗೆ ವ್ಯಾಪಾರ ಪರವಾನಗಿಗಳನ್ನು ನೀಡಿದೆ. ಆದರೆ ಬೀಡಿ, ಸಿಗರೆಟ್‌, ಗುಟ್ಕಾದಂತಹ ಉತ್ಪನ್ನಗ ಳನ್ನು ಮಾರಾಟ ಮಾಡುವ ಮಾರಾಟಗಾರರಿಗೆ ಪ್ರತ್ಯೇಕ ತಂಬಾಕು ಮಾರಾಟ ಪರವಾನಗಿ ಅಗತ್ಯವಿದೆ. ಪಾಲಿಕೆ ವ್ಯಾಪ್ತಿಯಲ್ಲಿ 40 ಸಾವಿರ ಮಾರಾಟಗಾರರು ತುಂಬಾಕು ಉತ್ಪನ್ನ ಮಾರಾಟ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. 100 ರಿಂದ 150 ಚದರ ಅಡಿಗಳ ಶಾಶ್ವತ ಅಂಗಡಿ ಸ್ಥಳವನ್ನು ಹೊಂದಿರುವ ಮಾರಾಟಗಾರರು ಮಾತ್ರ ತಂಬಾಕು ಮಾರಾಟ ಪರವಾನಗಿಗೆ ಅರ್ಹರಾಗಿರುತ್ತಾರೆ. ಪರವಾನಗಿಯನ್ನು ಅಂಗಡಿ ಮಾಲಿಕರ ಹೆಸರಿನಲ್ಲಿ ನೋಂದಾಯಿಸಬೇಕು. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಬೀದಿ ವ್ಯಾಪಾರಿಗಳು ಅಥವಾ ಫುಟ್‌ಪಾತ್‌ಗಳಲ್ಲಿ ಕಾರ್ಯನಿರ್ವಹಿಸುವವರು ಪರವಾನಗಿ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಪಾಲಿಕೆ ಮೂಲಗಳು ತಿಳಿಸಿವೆ

ನಿಷೇಧವಿದ್ದರೂ ಬೇಕರಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ: ಬೇಕರಿಗಳು ಮತ್ತು ಕಾಂಡಿಮೆಂಟ್‌ಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವು ಬೇಕರಿಗಳು, ಕಾಂಡಿಮೆಂಟ್‌ಗಳು, ಹೋಟೆಲ್‌ ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬೀಡಿ, ಸಿಗರೆಟ್‌ ಮಾರಲಾಗುತ್ತಿದೆ. ನಿಯಮಾನುಸಾರ ಧೂಮಪಾನ ಪ್ರದೇಶವನ್ನು ಹೊಂದಿರುವ ಹೋಟೆಲ್‌ಗ‌ಳು ಹಾಗೂ ಬಾರ್‌ಗಳಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀಡಿ, ಸಿಗರೆಟ್‌, ತಂಬಾಕು, ಗುಟ್ಕಾ ಸೇರಿ ತಂಬಾಕಿನ ಉತ್ಪನ್ನಗಳನ್ನ ಅಂಗಡಿಗಳಲ್ಲಿ ಮಾರಾಟ ಮಾಡಲು ಪ್ರತ್ಯೇಕ ಮಾರಾಟ ಪರವಾನಗಿ ಪಡೆಯ ಬೇಕೆಂಬ ನಿಯಮವನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅಂಗಡಿ ಮಾಲಿಕರು ಪ್ರತ್ಯೇಕವಾಗಿ 500 ರೂ.ನೀಡಿ ಮಾರಾಟ ಲೈಸೆನ್ಸ್‌ ಪಡೆಯಬೇಕಾಗುತ್ತದೆ. ●ಡಾ.ಸೈಯದ್‌ ಸಿರಾಜುದ್ದೀನ್‌ ಮದನಿ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ದೇವೇಶ ಸುಗರೇಪ್ಪಾ.