ಉದ್ಧಟತನ ತೋರಿದ ಜಿ.ಪಲ್ಲವಿಯವರ ಆಪ್ತ ಕಾರ್ಯದರ್ಶಿ ವರ್ಗಾಯಿಸಿ ಆದೇಶ

_49 ನೈಜ ಅಲೆಮಾರಿ ಗುಂಪುಗಳ ಹೋರಾಟಕ್ಕೆ ಮೊದಲ ಜಯ_

ಬೆಂಗಳೂರು ಜು.31: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರಿಗೆ ಅನಧಿಕೃತ ಆಗಿಯೂ ನಿಯೋಜನೆಯಾಗಿದ್ದ ಆಪ್ತ ಕಾರ್ಯದರ್ಶಿ ಬಿ.ಎಸ್.ಆನಂದಕುಮಾರ್(ಆನಂದ ಏಕಲವ್ಯ) ಉದ್ಧಟತನ ಮೆರೆದಿದ್ದಕ್ಕಾಗಿ ಕೊನೆಗೂ ಅವರ ಮಾತೃ ಇಲಾಖೆಯಾದ ಇಂಧನ ಇಲಾಖೆಗೆ ವರ್ಗಾಯಿಸಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದು, ಇದು ನಮಗೆ ಸಿಕ್ಕ ಮೊದಲ ಜಯ ಎಂದು 49 ನೈಜ ಅಲೆಮಾರಿ ಸಮುದಾಯಗಳ ಒಕ್ಕೂಟದ ನಾಯಕ ಲೋಹಿತಾಕ್ಷ ಬಿ. ಆರ್ ತಿಳಿಸಿದರು.

ಮುಂದುವರೆದು ಮಾತನಾಡುತ್ತಾ, ಸುಳ್ಳು ಆರೋಪ ಹೊರಿಸಿ ಜಿ.ಪಲ್ಲವಿ ಮತ್ತು ಇತರರು ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳ ಏಳು ನಾಯಕರ ಮೇಲೆ ಕೇಸು ಹಾಕಿಸಿದರು.

ಆ ಆರೋಪ ಸಂಪೂರ್ಣ ಆಧಾರರಹಿತವಾಗಿದ್ದು, ಅವರು ಸೃಷ್ಟಿಸಿದ ಸುಳ್ಳು ಕಥೆಗಳನ್ನು ಕೂಡ ಯಾರೂ ನಂಬಲಾಗದಂತಿತ್ತು. ನಮ್ಮ ಅಂತಃಕರಣದ ಮಾಜಿ ಸಚಿವ ಎಚ್. ಆಂಜನೇಯ ನಮ್ಮೊಂದಿಗೆ ಇರದಿದ್ದರೆ ಕಷ್ಟವಾಗುತ್ತಿತ್ತು. ಅವರಿಗೂ ಮತ್ತು ನ್ಯಾಯಕ್ಕಾಗಿ ಹೋರಾಡಿದ ಎಲ್ಲಾ ಮುಖಂಡರಿಗೂ ಧನ್ಯವಾದಗಳು. ಇಂದು ಆನಂದ ಏಕಲವ್ಯ ಅವರನ್ನು ನಮ್ಮ ನಿಗಮದಿಂದ ತೆಗೆದುಹಾಕುವ ಮೂಲಕ ಮೊದಲ ಜಯವನ್ನು ಸಾಧಿಸಿಕೊಂಡಿದ್ದೇವೆ. ಜಿ.ಪಲ್ಲವಿ ಅವರನ್ನು ಕೂಡ ನಿಗಮದಿಂದ ತೆಗೆದು ಹಾಕಲು ಮತ್ತು ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದವರಿಗೆ ಕಾನೂನಿನ ಚೌಕಟ್ಟಿನಡಿಯಲ್ಲಿಯೇ ತಕ್ಕ ಉತ್ತರ ಕೊಡಲು ಹೋರಾಟ ಮುಂದುವರಿಯುತ್ತದೆ. ಇದಕ್ಕೆಲ್ಲಾ ಸಹಕರಿಸಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. 49 ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಒಳ ಮೀಸಲಾತಿ ಪಾಲು ಪಡೆಯಲು ನಮ್ಮ ಹೋರಾಟ ಮುಂದುವರೆದಿದೆ. ಸರ್ಕಾರ ಆಸ್ಥೆಯಿಂದ ಕೇಳಿಸಿಕೊಂಡು ಸ್ಪಂದಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು, ಮಾಜಿ ಸಚಿವರೂ ಆದ ಹೆಚ್. ಆಂಜನೇಯ ನೇತೃತ್ವದಲ್ಲಿ ಜೂನ್ 05 ರಂದು ನಡೆದ ಪರಿಶಿಷ್ಟ ಜಾತಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿ ದಕ್ಕಲಿಗ, ಸುಡುಗಾಡು ಸಿದ್ಧ, ಸಿಳ್ಳೇಕ್ಯಾತ, ಮಾಂಗ್ ಗಾರುಡಿಗ, ಹಂದಿಜೋಗಿ, ಬುಡ್ಗಜಂಗಮ, ಗಂಟಿಚೋರ್, ದೊಂಬರು, ಮುಕ್ತಿ, ಚನ್ನದಾಸರ್, ಗೋಸಂಗಿ ಸೇರಿದಂತೆ 49 ಜಾತಿಗಳ ಸಭೆಯನ್ನು ಮಾತ್ರ ಕರೆಯಲಾಗಿತ್ತು. ಆ ಸಭೆಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದ ಏಕಲವ್ಯ ಸುಡುಗಾಡು ಸಿದ್ದ ಜನಾಂಗದ ಮುಖಂಡ ಲೋಹಿತಾಕ್ಷ ಹಾಗೂ ಇತರೆ ಅಲೆಮಾರಿ ಮುಖಂಡರಿಗೆ ಅವಾಚ್ಯ ಶಬ್ದಗಳಿಂದ(ಅವನ್ಯಾವನೋ ಸೂ…ಮಗಾ) ನಿಂದಿಸಿ, ದುರ್ವರ್ತನೆ ಎಸಗಿ ಅಹಿತಕರ ಘಟನೆಗೆ ಕಾರಣರಾಗಿರುತ್ತಾರೆಂದು ಇಲಾಖೆಗೆ ಆಂಜನೇಯ ದೂರು ನೀಡಿದ್ದರು.

ಅದಕ್ಕೆ ಸ್ಪಂದಿಸಿ‌ದ ಇಲಾಖೆ, ಆನಂದ ಅವರಿಗೆ ಜುಲೈ 09 ರಂದು ಸರ್ಕಾರದಿಂದ ನೋಟೀಸ್ ಜಾರಿ ಮಾಡಿತು. ಆ ನೋಟೀಸ್‌ಗೆ ಪ್ರತಿಕ್ರಿಯಿಸಿದ ಆನಂದ ಅವರು, “ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ ಎಂಬ ಸೌಜನ್ಯವಿಲ್ಲದೇ, ದೌರ್ಜನ್ಯ ಎಸಗಿದ ಸಂದರ್ಭದಲ್ಲಿ ಅಧ್ಯಕ್ಷರ ರಕ್ಷಣೆಗೆ ಮುಂದಾಗಿರುತ್ತೇನೆ ಹಾಗಾಗಿ ಆ ಅಹಿತಕರ ಘಟನೆಗೆ ನಾನು ಕಾರಣನಾಗಿರುವುದಿಲ್ಲವೆಂದು ಜುಲೈ 14 ರಂದು ಸಮಜಾಯಿಷಿ ನೀಡಿದ್ದಾರೆ”. ಇದೆಲ್ಲವನ್ನೂ ಪರಿಶೀಲಿಸಿದ ಸರ್ಕಾರ ಮೂಲತಃ ಇಂಧನ ಇಲಾಖೆಯ ಬೆವಿಕಂ ಕಾರ್ಯ ಮತ್ತು ಪಾಲನ ಘಟಕದ ಸಹಾಯಕ ಇಂಜಿನಿಯರ್(ವಿ) ಆಗಿದ್ದ ಆನಂದಕುಮಾರ ಸಲ್ಲಿಸಿರುವ ಸಮಜಾಯಿಷಿಯನ್ನು ಒಪ್ಪದೇ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಗೊಳಿಸಿ ತನ್ನ ಮಾತೃ ಇಲಾಖೆಗೆ ಮರಳಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕೆಂದು ಸೂಚಿಸಿ ಆದೇಶಿಸಿದೆ.

49 ಅಲೆಮಾರಿ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಪ್ರತಿಕ್ರಿಯಿಸುತ್ತಾ, “ಜೈ ಅಲೆಮಾರಿ ಒಗ್ಗಟ್ಟಿನಲ್ಲಿ ಬಲವಿದೆ ಸತ್ಯಕ್ಕೆ ಸಂದ ಜಯ; ಇದು ನಮ್ಮ ಮೊದಲ ಜಯವಾಗಿದ್ದು, 2ನೇ ಜಯ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವ ನಮ್ಮ ಏಳು ಮುಖಂಡರ ವಿರುದ್ಧ ಸುಳ್ಳು ದೂರನ್ನು ನೀಡಿ ಮಾಜಿ ಸಚಿವ ಹೆಚ್. ಆಂಜನೇಯ ಅವರ ಹೆಸರಿಗೂ ಮಸಿ ಬಳಿಯುವಂತಹ‌ ಆಧಾರರಹಿತ ಆರೋಪ ಮಾಡಿದ್ದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಅಧ್ಯಕ್ಷೆ ಜಿ.ಪಲ್ಲವಿ ಅವರ ರಾಜೀನಾಮೆಯನ್ನು ಕೂಡ ಸರ್ಕಾರ ಪಡೆದುಕೊಳ್ಳಲು ಕೂಡಲೇ ಮುಂದಾಗಬೇಕು. ಇಲ್ಲದಿದ್ದರೆ ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

error: Content is protected !!