ಸಮಸ್ತಿಪುರ: ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಈಗಾಗಲೇ ಮುಕ್ತಾಯಗೊಂಡಿದೆ. ಎರಡನೇ ಹಂತದ ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯೆ, ಸಮಸ್ತಿಪುರ ಜಿಲ್ಲೆಯ ಸರೈರಂಜನ್ ವಿಧಾನಸಭಾ ಕ್ಷೇತ್ರದಲ್ಲಿ ವಿವಿಪ್ಯಾಟ್ ಚೀಟಿಗಳ ರಾಶಿ ಪತ್ತೆಯಾಗಿದೆ. ಈ ಸಂಬಂಧ ಸಹಾಯಕ ಚುನಾವಣಾಧಿಕಾರಿಯನ್ನು ಶನಿವಾರ ಅಮಾನತುಗೊಳಿಸಲಾಗಿದೆ.
ಸಮಸ್ತಿಪುರ ಜಿಲ್ಲೆಯ ಕೆಎಆರ್ಎಸ್ ಕಾಲೇಜು ಬಳಿಯಲ್ಲಿ ಮತದಾನ ಮಾಡಲಾದ ವಿವಿಪ್ಯಾಟ್ ಚೀಟಿಗಳು ಕಂಡುಬಂದಿರುವುದು ಕೋಲಾಹಲಕ್ಕೆ ಕಾರಣವಾಯಿತು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ, ಚುನಾವಣಾ ಆಯೋಗವು ಅಧಿಕಾರಿಯ ಅಮಾನತು ಮಾಡಿದೆ. ಅಲ್ಲದೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯು ಹೇಳಿಕೆ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದೆ. ‘ಇವು ಅಣಕು ಸಮೀಕ್ಷೆಯ ವಿವಿಪ್ಯಾಟ್ ಚೀಟಿಗಳಾಗಿದ್ದು, ಮತದಾನ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಯಾವುದೇ ದಕ್ಕೆಯಾಗಿಲ್ಲ. ಕಣದಲ್ಲಿರುವ ಅಭ್ಯರ್ಥಿಗಳಿಗೂ ಈ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಆದಾಗ್ಯೂ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ARO ಅವರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಸಹ ಪ್ರಾರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಹೇಳಿದೆ.
