ನವದೆಹಲಿ: ಸ್ವಾಮೀಜಿಯಾಗಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ನೀವು ಗಂಭೀರವಾಗಿರಬೇಕು ಎಂದು ಕನ್ನೇರಿ ಕಾಡುಸಿದ್ದೇಶ್ವರ ಸ್ವಾಮಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕನ್ನೇರಿ ಕಾಡುಸಿದ್ದೇಶ್ವರ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ವಿಚಾರಣೆ ವೇಳೆ ನ್ಯಾಯಪೀಠ ಸ್ವಾಮಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠ ವಿಚಾರಣೆ ನಡೆಸಿತು. ಸ್ವಾಮೀಜಿಯಾಗಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ, ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ, ಅವಹೇಳನಕಾರಿ ಭಾಷೆ ಬಳಸಿದ್ದೀರಿ, ಇದು ವಾಕ್ ಸ್ವಾತಂತ್ರ‍್ಯ ವ್ಯಾಪ್ತಿಯಲ್ಲಿಲ್ಲ ಎಂದು ಆಕ್ರೋಶ ಹೊರಹಾಕಿದೆ.
ಮುಂದುವರಿದು, ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿಲ್ಲ, ಮೊದಲು ನೀವು ಮಾತನಾಡುವುದು ನಿಲ್ಲಿಸಿ, ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ, ಸದ್ಯಕ್ಕೆ ಒಂದೆರಡು ತಿಂಗಳುಗಳ ಕಾಲ ನೀವು ವಿಜಯಪುರಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
