ಮಂಗಳೂರು: ಎಲ್ಲಿಯೋ ಕುಳಿತು ರಾಜಕೀಯ ಹೇಳಿಕೆ ಕೊಟ್ರೆ ಅದಕ್ಕೆ ಉತ್ತರ ಕೊಡಲ್ಲ, ನಾಳೆ ನಾನು ಕಚೇರಿಯಲ್ಲಿ ಇರುತ್ತೇನೆ, ಲಿಖಿತವಾಗಿ ದೂರು ಕೊಡಲಿ, ಅಗತ್ಯ ಬಿದ್ದರೆ ತನಿಖೆ ಮಾಡಿಸುತ್ತೇನೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಅಮೆರಿಕದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪದ ವಿಚಾರವನ್ನು ಗಮನಿಸಿದ್ದೇನೆ. ಎಲ್ಲದಕ್ಕೂ ಮದ್ದಿದೆ. ಕೆಲವರ ಅಸೂಯೆಗೆ ಮದ್ದು ಇಲ್ಲ. ಹೊಸತಾಗಿ ಮನೆ ಕಟ್ಟುವಾಗ ದೃಷ್ಟಿ ಬೀಳಬಾರದೆಂದು ದೃಷ್ಟಿ ಬೊಂಬೆ ಕಟ್ಟುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ವಿಧಾನಸಭೆಗೆ ಗೌರವ ಸಿಗುವ ಸಂದರ್ಭ ಬಂದಿದೆ. ಇವರ ಆರೋಪ ನಮ್ಮ ವಿಧಾನಸಭೆಗೆ ದೃಷ್ಟಿ ಬೊಂಬೆ ಇದ್ದಂತೆ ಎಂದು ಹೇಳಿದ್ದಾರೆ.
ಶಾಸಕರಿಗೆ ಸವಲತ್ತು ಸೌಲಭ್ಯ ಒದಗಿಸುವುದು ನನ್ನ ಜವಾಬ್ದಾರಿ. ಆ ಕೆಲಸವನ್ನು ಮಾಡಿಸಿದ್ದೇನೆ. ಯಾರೋ ಮಾತನಾಡುತ್ತಾರೆಂದು ಅದಕ್ಕೆಲ್ಲ ಉತ್ತರ ಕೊಡುತ್ತ ಕೂರುವುದಕ್ಕೆ ಆಗುವುದಿಲ್ಲ. ಯಾರಿಗಾದ್ರೂ ಸಂಶಯ ಇದ್ದರೆ ಕಚೇರಿಗೆ ಬರಲಿ, ಸಂಶಯ ನಿವಾರಿಸುತ್ತೇನೆ. ನಾನು ಸಂವಿಧಾನ ಪೀಠದಲ್ಲಿ ಇದ್ದೇನೆ. ಹಾಗಾಗಿ ಯಾರದ್ದೋ ಮಾತಿಗೆಲ್ಲ ಉತ್ತರಿಸಲು ಆಗಲ್ಲ ಎಂದು ತಿಳಿಸಿದರು.
