ನಿಡಸೋಸಿ ಗ್ರಾಮದಲ್ಲಿ ಮಹನೀಯರ ಪುಣ್ಯ ಸ್ಮರಣೆ ಅಂಗವಾಗಿ ಭಾವಪೂರ್ಣ ಕಾರ್ಯಕ್ರಮ ನಡೆಯಿತು. ಸಮಾಜದಲ್ಲಿ ಮೌಲ್ಯಾಧಾರಿತ ಬದುಕು, ಸೇವಾ ಮನೋಭಾವ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹನೀಯರ ಸ್ಮರಣೆ ಎಲ್ಲರ ಮನಸ್ಸುಗಳನ್ನು ಸ್ಪರ್ಶಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDVS ಸಂಘದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಎ. ಬಿ. ಪಾಟೀಲ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿ ಶ್ರೀ ಬಾಳಣ್ಣ ಶೀಗೀಹಳ್ಳಿ ಅವರು ಉಪಸ್ಥಿತರಿದ್ದು, ತಮ್ಮ ಭಾಷಣದಲ್ಲಿ ಮಹನೀಯರ ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಎಂದು ಹೇಳಿದರು. ಸಮಾಜದ ಒಗ್ಗಟ್ಟು, ಸಂಸ್ಕಾರ ಮತ್ತು ಸೇವಾಭಾವನೆ ಬೆಳೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದರು ಹಾಗೂ BDCC ಬ್ಯಾಂಕ್ ನಿರ್ದೇಶಕರಾದ ಶ್ರೀ ರಮೇಶ್ ಕತ್ತಿ ಅವರು ವೋಲ್ವೋಸ್ ಸ್ಟೆಮ್ ಸೈನ್ಸ್ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಶ್ರೀಮನ್ ನಿರಂಜನ ಡಾ. ಶಿವಲಿಂಗೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ನೀಡಿದ್ದು, ತಮ್ಮ ಆಶೀರ್ವಚನಗಳ ಮೂಲಕ ಸಭಿಕರಿಗೆ ಆಧ್ಯಾತ್ಮಿಕ ಸ್ಪೂರ್ತಿ ಹಾಗೂ ಸತ್ಸಂಕಲ್ಪದ ಸಂದೇಶವನ್ನು ನೀಡಿದರು. ಈ ಪ್ರಯೋಗಾಲಯವು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಹನೀಯರ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಹಾಗೂ ಮೌನಾಚರಣೆ ನಡೆಸಲಾಯಿತು. ವಿವಿಧ ಗಣ್ಯರು ಮಾತನಾಡಿ, ಅವರ ಸರಳತೆ, ನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು. ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿದರು.
ಭಕ್ತಿಭಾವ ಮತ್ತು ಶಿಸ್ತಿನ ವಾತಾವರಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ನಂತರ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಸದಾನಂದ ಎಮ್
